ಈ ಬ್ಲಾಗ್ ಅನ್ನು ಹುಡುಕಿ

ಮಂಗಳವಾರ, ನವೆಂಬರ್ 13, 2018

ಕುಂಬಾರನ ಯುಗಾದಿ



.......ಕುಂಬಾರನ ಯುಗಾದಿ........

ಭೂವಿಗೆದೆಯೊಡ್ಡಿ
ಆವುಗೆಯ ಬೆಂಕಿಯನುಂಡು
ಮಡಕೆಯ ಕೊರಳಿಗೆ
ಹಳೆಯ ಬೇರಿನ ಮೇಲೆ ಚಿಗುರಿದ
ಹೊಸ ಬೇವು–ಮಾವು ಎಲೆಯ ಕಟ್ಟಿ
ನಮ್ಮೊಳಗೆ ಅಡಗಿರುವ ಮೌನ ಕ್ರಾಂತಿಯ ಎಚ್ಚರಿಸಿ
ಉಗ್ರಕ್ರಾಂತಿಗೆ ಮುನ್ನುಡಿ ಬರೆಯೋಣ
ನಮ್ಮ ಬದುಕಿನ ಭಾಗವಾದ ಚಕ್ರ
ಖುತುಚಕ್ರದಂತೆ ಓಡಬೇಕು ಅದಕ್ಕೆ
ಅಹಂಗಳನ್ನು, ಪ್ರತಿಷ್ಟೆಗಳನ್ನು ಬಿಟ್ಟು
ನಾವು ನಾವಾಗಬೇಕು
ಹಳೆಬೇರು ಹೊಸತಿಗೆ ಮೂಲಸೆಲೆಯಾಗಿ
ಹೇವಿಳಂಬಿಯಲ್ಲಿ
ಹೊಸ ಹೋರಾಟಕ್ಕೆ ಅಣಿಯಾಗುತ್ತಾ
ಹೊಸ ವರ್ಷದ ಹೊಸ ನಸುಕಿನ ಬೆಳಕಲ್ಲಿ
ನಮ್ಮ ಬದುಕಿಗೆ
ಹೊಸ ಯುಗಾದಿಯನ್ನು ಬರಮಾಡಿಕೊಳ್ಳೋಣ...
            ಕುಬೇರ ಕುಂಬಾರ



ಕುಂಬಾರನ ಮನೆಯಂಗಳದ ಹಣತೆ


   
ಕುಂಬಾರನ ಮನೆಯಂಗಳದ ಹಣತೆ
  
ಕುಂಬಾರನ ಹಣತೆಯಲ್ಲಿ
ಭಕ್ತಿಯ ತೈಲವನು ಸುರಿದು
ಶುದ್ಧವೆಂಬ ಹತ್ತಿಯ ಭತ್ತಿಯನಿಟ್ಟು
ಅಗ್ನಿದೇವನ ಆಹ್ವಾನಿಸಿ
ಅಜ್ಞಾನ,ಕಾಮ,ಕ್ರೋದ,ಮದ–ಮತ್ಸರ,ಮೋಹ–ಲೋಭಗಳನ್ನು
ಸುಟ್ಟು ಸುಜ್ಞಾನವೆಂಬ ಬೆಳಕನ್ನು ಹರಿಸೋಣ
ಕುಂಬಾರನ ಹಣತೆಯಲ್ಲಿ
ಅ ಸಂಘ ಈ ಸಂಘ
ಅ ತೆಲುಗು ಈ ತಮಿಳು
ಅ ಕುಲ ಈ ಕುಲಾಲ
ಅ ಮೋಹ ಈ ಮೂಲ್ಯ
ಅ ಲಿಂಗ ಈ ಲಿಂಗಾಯಿತ
ಅ ಚಕ್ರ ಈ ಚಕ್ರಸಾಲಿ
ಅ ಭಕ್ತ ಈ ಗುಂಡಾಭಕ್ತ
ಅ ಕುಂಬಾರ ಶೇಟ್ಟಿ ಈ ಕನ್ನಡ ಕುಂಬಾರ
ಎಂಬ ಎಲ್ಲಾ ಭತ್ತಿಯ ಒಸೆದು‌‌
ಅಖಂಡವೆಂಬ ಒಂದೇ ಭತ್ತಿಯ ಮಾಡಿ
ಎಲ್ಲರ ಮನೆಯ ಏಕತೆಯ ಎಣ್ಣೆಯನ್ನು ಸುರಿದು
ಅ ವಿಧ ಈ ವಿಧಗಳು
ಅ ಅಚಾರ ಈ ವಿಚಾರಗಳನ್ನು ಸುಟ್ಟು
ಕುಂಬಾರನ ಮನೆಯಂಗಳದಲ್ಲಿ
ಬೆಳಕನು ಚಲ್ಲೋಣ
ದೀಪಾವಳಿಯ ಸಂತಸದಲಿ.....

    ಕುಬೇರ ಕುಂಬಾರ



ಮಂಜಪ್ಪ ಬುರುಡೆಕಟ್ಟೆ ಕುಂಬಾರ ಗುರುಗಳಿಗೆ ಜನ್ಮ ದಿನದ ಶುಭಾಶಯಗಳು

ಮಂಜಪ್ಪ ಬುರುಡೆಕಟ್ಟೆ ಕುಂಬಾರ ಗುರುಗಳಿಗೆ ಜನ್ಮ ದಿನದ
ಶುಭಾಶಯಗಳು
    ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಬುರುಡೆಕಟ್ಟೆ ಗ್ರಾಮದ ಗಿರಿಜಮ್ಮ, ಮಲ್ಲೇಶ ಕುಂಬಾರ ದಂಪತಿಯರಲ್ಲಿ ಜನಿಸಿ , ಬುರುಡೆಕಟ್ಟೆ, ಆನಿವಾಳ, ಮಲ್ಲಪ್ಪನಹಳ್ಳಿಗಳಲ್ಲಿ ಪ್ರಾಥಮಿಕ, ಪ್ರೌಢ, ಪದವಿ–ಪೂರ್ವ ಶಿಕ್ಷಣ ಹಾಗೂ ಚಿತ್ರದುರ್ಗದಲ್ಲಿ ಶಿಕ್ಷಕರ ತರಬೇತಿ ಪಡೆದು ಶಿಕ್ಷಕ ವೃತ್ತಿಗೆ ನೇಮಕಗೊಂಡರು. ಪ್ರಸ್ತುತ ದಾವಣಗೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾರ್ಯನಿರ್ವಿಸುತ್ತಿದ್ದಾರೆ. ಮೈಸೂರು ಮಾನಸಗಂಗೋತ್ರಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರಪದವಿ ಪಡೆದಿ್್ದಾರೆ. ನಾಟಕ, ಕವನ ರಚನೆ, ಸಾಹಿತ್ಯ ರಚನೆ ಮತ್ತು ಇತಿಹಾಸ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ವಿವಿಧ ಇತಿಹಾಸ ಸಮ್ಮೇಳನದಲ್ಲಿ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಶ್ರೀ ಸಿದ್ಧಗಂಗಾ ಮಠವು ನಾಡಿನ ಪುಣ್ಯಪುರುಷರ, ದಾಸೋಹಿಗಳ ಕುರಿತು ಜ್ಞಾನದಾಸೋಹ ಮಣಿಮಾಲೆಯ ಎಂಬ ನೂರಾ ಎಂಟು ಪುಸ್ತಕಗಳನ್ನು ಪ್ರಕಟಿಸಿತ್ತು. ಇದರಲ್ಲಿ ಮಂಜಪ್ಪರವರ ಶಿವಶರಣೆಯರು ಎಂಬ ಒಂದು ಕೃತಿಯೂ ಸೇರಿದೆ. ಇತ್ತೀಚೆಗೆ ಸರ್ವಜ್ಞ ಅವರ ಕುರಿತ ಸಂಶೋಧನ ಪುಸ್ತಕ ಬಿಡುಗಡೆಗೆ ಸಿದ್ಧಗೊಂಡಿದೆ.
    ಕುಂಬಾರ ಜನಾಂಗದ ಅಧ್ಯಯನ ಮಾಡುತ್ತಿರುವವರಲ್ಲಿ ಮಂಜಪ್ಪ ಬುರುಡೆಕಟ್ಟೆಯವರು ಮುಂಚುಣಿಯಲ್ಲಿ ಬಂದು ನಿಲ್ಲುತ್ತಾರೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಬಿಡುವಿನ ಮತ್ತು ರಜೆಯ ಸಮಯದಲ್ಲಿ ಕುಂಬಾರ ಜನಾಂಗಕ್ಕೆ ಸಂಬಂದಿಸಿದಂತೆ ಅನೇಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಪ್ರತಿ ದಿನವು, ಪ್ರತಿ ಕ್ಷಣವು ಕುಂಬಾರ ಜನಾಂಗಕ್ಕಾಗಿ ಇವರ ಹೃದಯ ತುಡಿಯುತ್ತಿರುತ್ತದೆ. ಇವರ ಈ ಉತ್ಸಾಹ ಎಂದೂ ಬತ್ತಿಲ್ಲ, ತುಂಬ ಹತ್ತಿರ ದಿಂದ ನಾನು ನೋಡಿದಂತೆ ಕುಂಬಾರ ಜನಾಂಗದ ಅಭಿವೃದ್ಧಿ ಕುರಿತು ಯಾವಾಗಲೂ ಯೋಚಿಸುತ್ತಿರುತ್ತಾರೆ. ಸಂಘ –ಸಂಸ್ಥೆಗಳಿಗೆ, ಯುವಕರಿಗೆ ಮಾರ್ಗದರ್ಶಕರಾಗಿ ನಿಂತು, ಸಲಹೆ ಸೂಚನೆಯನ್ನು ನಿಡುತ್ತಿರುತ್ತಾರೆ. ಕುಂಬಾರರ ವೈಭವಗಳನ್ನು, ಮಹತ್ವವನ್ನು, ಶ್ರೇಷ್ಟತೆಯನ್ನು, ವರ್ಚಸ್ಸುನ್ನು ಸದಾ ಮೆರೆಸುತ್ತಾ, ಕುಂಬಾರ ಜನಾಂಗದ ಹೆಸರಿಗೆ ಉಸಿರು ತುಂಬಲು ಮೌನವಾಗಿ ಸಂಶೋಧನೆ ಮಾಡುತ್ತ, ದುಡಿಯುತ್ತ ತಮ್ಮ ಜೀವನವನ್ನೇ ಈ ಕುಂಬಾರ ಜನಾಂಗಕ್ಕೆ ಮುಡಿಪಾಗಿಟ್ಟಿದ್ದಾರೆ. ಇಂದು ಅವರ ಹುಟ್ಟಿದ ದಿನ. ಮಂಜಪ್ಪ ಗುರುಗಳಿಗೆ ಕುಂಬಾರ ಜನಾಂಗದ ಪರವಾಗಿ ಮತ್ತು ನನ್ನ ವ್ಯಯಕ್ತಿವಾಗಿ, ಅವರಿಗೆ ತುಂಬು ಹೃದಯದಿಂದ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಲು ಹೆಮ್ಮೆ ಪಡುತ್ತೆನೆ.


ರತ್ನಪ್ಪಣ್ಣ ಕುಂಬಾರ ರವರ ಜೀವನ ಚರಿತ್ರೆಯ ಪುಸ್ತಕ


  ರತ್ನಪ್ಪಣ್ಣ ಕುಂಬಾರ ರವರ ಜೀವನ ಚರಿತ್ರೆಯ ಪುಸ್ತಕ

           ಗದಗಿನ ಡಂಬಳದ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠವು ಡಾ. ಎಂ.ಎಂ. ಕುಲಬುರ್ಗಿ ಅಧ್ಯಯನಸಂಸ್ಥೆಯ ಅಡಿಯಲ್ಲಿ 19,20 ಮತ್ತು 21ನೇ ಶತಮಾನದಲ್ಲಿ ಬಾಳಿದ ನೂರಾರು ಜನ ಲಿಂಗಾಯತ ಪುಣ್ಯಪುರುಷರನ್ನು ಸ್ಮರಿಸುತ್ತ, ಉಪನ್ಯಾಸಗಳನ್ನು ಏರ್ಪಡಿಸುತ್ತ ಮತ್ತು ಅ ಉಪನ್ಯಾಸ ಮಾಲೆಯು ಜನಮುಖಿಯಾಗಬೇಕು ಎಂಬ ದೃಷ್ಟಿಯಿಂದ ವಿವಿಧ ಮಾಲಿಕೆಗಳಡಿಯಲ್ಲಿ ಪುಸ್ತಕಗಳನ್ನು ಪ್ರಕಟಿಸಿ ನಾಡಿನ ಜನರಿಗೆ ಉಣಪಡಿಸುತ್ತಿದೆ. ಇತಂಹ ಮಾಲಿಕೆಯಲ್ಲಿ ‘ಲಿಂಗಾಯತ ಪುಣ್ಯಪುರುಷ ಸಾಹಿತ್ಯ ರತ್ನಮಾಲೆ’ ಯೂ ಸಹ ಒಂದು.
    ಪ್ರತಿ ತಿಂಗಳು ಸಮಾಜವನ್ನುದ್ಧರಿಸಿದ ಒಬ್ಬ ಲಿಂಗಾಯತ ಪುಣ್ಯಪುರುಷರ ಚರಿತ್ರೆಯನ್ನು ಕುರಿತು ಉಪನ್ಯಾಸ ಏರ್ಪಡಿಸುವುದು. ಏರ್ಪಡಿಸಿದ ಉಪನ್ಯಾಸವನ್ನು ಪ್ರಕಟಿಸಿ ಸುಲಭ ಬೆಲೆಯಲ್ಲಿ ವಿತರಣೆಗೊಳಿಸುವುದು, ಈ ಮಾಲಿಕೆಯ ಸಂಕಲ್ಪ. ಅದರಂತೆ ತಿಂಗಳು ತಿಂಗಳು ಪ್ರಕಟವಾಗುವ ಮಾಲಿಕೆಯಲ್ಲಿ 312ನೇ ಕೃತಿಯಾಗಿ ನಮ್ಮ ಕುಂಬಾರ ಜನಾಂಗದ ಹೆಮ್ಮೆಯ ಹಾಗೂ ದೇಶಭಕ್ತರಾದ ರತ್ನಪ್ಪ ಕುಂಬಾರ ಅವರನ್ನು ಕುರಿತು ಪ್ರಕಟವಾಗಿದೆ. ಡಾ.ಎಂ.ಬಿ. ಹೂಗಾರ ಎಂಬುವವರು ಈ ಪುಸ್ತಕವನ್ನು ರಚಿಸಿದ್ದಾರೆ. ಹುಬ್ಬಳಿಯ ಮಠದ ಭಕ್ತರಾದ ಶ್ರೀ ಉಮಾದೇವಿ ಗುರುಸಿದ್ಧಪ್ಪ ಬುಳ್ಳಾನವರು ಪ್ರಕಟಣೆಗೆ ಸಹಕಾರಿಸಿದ್ದಾರೆ.
    ದೇಶಭಕ್ತ ಮತ್ತು ಸಂವಿಧಾನ ರಚನೆಯಲ್ಲಿ ಪಾಲ್ಗೊಂಡ ರತ್ನಪ್ಪಣ್ಣ ಕುಂಬಾರ ಅವರ ಜೀವನ, ಶಿಕ್ಷಣ, ಸ್ವಾತಂತ್ರ್ಯ ಚಳುವಳಿಯ ಹೋರಾಟ, ರಾಜಕೀಯ, ಸಹಕಾರ ಚಳುವಳಿ, ಸೇವಾಮನೋಭಾವ ಮತ್ತು ಇತ್ಯಾಧಿ ವಿಷಯಗಳನ್ನು ‘‘ಹೋರಟದ ಹೆಜ್ಜೆ, ಸಹಕಾರ ಚಳುವಳಿ, ಒಕ್ಕಲುತನದ ವಿಕಾಸ, ಕಾರ್ಮಿಕರ ಕಲ್ಯಾಣ–ಶಿಕ್ಷಣ, ರಾಜಕೀಯ ಸೇವೆ, ಪ್ರಗತಿಪರ ಚಿಂತನ ಮತ್ತು ಹಿರಿಯರು ಕಂಡ ಅಣ’’್ಣಾ ಎಂದು, ಒಟ್ಟು ಏಳು ಅಧ್ಯಾಯನದ ಮೂಲಕ ಲೇಖಕರು ಸಮಗ್ರವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಂದು ಅಧ್ಯಾಯವು ಅವರ ವ್ಯಕ್ತಿತ್ವ, ಅದರ್ಶಮೌಲ್ಯಗಳು ಹಾಗೂ ಅವರ ಸಮಾಜೀಕ ಜೀವನದ ದಿಟ್ಟತನದ ನಿಲುವುಗಳನ್ನು ಮತ್ತು ಹೋರಾಟಗಳನ್ನು ಓದುತ್ತಾ ಹೋದರೆ ರೋಮಾಂಚನವಾಗುತ್ತದೆ.
    ರತ್ನಪ್ಪಣ್ಣ ಕುಂಬಾರ ಅವರು ದಕ್ಷಿಣ  ಭಾರತದ ಹಲವು ಸಂಸ್ಥಾನಗಳ ವಿಲಿನೀಕರಣಕ್ಕೆ ಪ್ರಯತ್ನಿಸಿ ದಕ್ಷಿಣ ಭಾರತದ ವಲ್ಲಭಭಾಯಿ ಪಟೇಲರೆಂದು ಖ್ಯಾತಿಗೆ ಭಾಜನರಾಗಿದ್ದರು. ಲಿಂಗಾಯತ ಬೋರ್ಡಿಂಗ್ ಸಂಸ್ಥೆಯ ಅಧೀಕ್ಷಕ ಹುದ್ದೆಗೆ ರಾಜೀನಾಮೆ ಕೊಟ್ಟು ಸ್ವತಂತ್ರ ಚಳುವಳಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಫೌಜಪುರ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸುವ ಮೂಲಕ ರಾಜಕೀಯ ಜೀವನಕ್ಕೆ ಚಾಲನೆ ನೀಡಿದರು. ಅಗಸ್ಟ್ 9, 1942ರ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿಜೀಯವರ ಕರೆಯ ಮೇರೆಗೆ ಸಕ್ರಿಯವಾಗಿ ಭಾಗವಹಿಸಿ ಚಲೇಚಾವ್ ಚಳುವಳಿಯನ್ನು ಮಹಾರಾಷ್ಟ್ರದಲ್ಲಿ ಯಶಸ್ವಿಗೊಳಿಸಿ ಬ್ರೀಟಿಷರ ಕೆಂಗಣ್ಣಿಗೆ ಗುರಿಯಾಗಿ ಜೈಲುವಾಸವನ್ನು ಅನುಭವಿಸಿದರು.
   
    ’ನಹಿ ಸಂಸ್ಕಾರ ನಹಿ ಸಹಕಾರ’ ಎಂದು ಮಹಾರಾಷ್ಟ್ರದ ಗಡಿಭಾಗದಲ್ಲಿ ಲೋಕ ಕಲ್ಯಾಣಕಾರಕ ಕಾರ್ಯ ಮಾಡಿ ಜನಸಾಮಾನ್ಯರಿಂದ ದೇಶಭಕ್ತ ಎಂಬ ಗೌರವಕ್ಕೆ ಪಾತ್ರರಾದರು. ಸಹಕಾರ ತತ್ವದ ಬುನಾದಿಯ ಮೇಲೆ ಸಮಾಜವಾದವನ್ನು ಪ್ರತಿಷ್ಠಾಪಿಸಿದ ಶ್ರೇಯಸ್ಸು ಅವರದು. ಸಕ್ಕರೆ ಕಾರಖಾನೆ, ನೂಲಿನ ಗಿರಣಿ, ಶಿಕ್ಷಣ ಸಂಸ್ಥೆಗಳು, ಬ್ಯಾಂಕ್ ಮೊದಲಾದ ಸಂಸ್ಥೆಗಳ ಸಂಸ್ಥಾಪಕರಾಗಿ ಅವರು ಮಾಡಿದ ಕಾರ್ಯ ಅವಿಸ್ಮರಣೀಯವಾಗಿದೆ. ಸ್ವಾತಂತ್ರ್ಯಾನಂತರವೂ ಶಾಸಕರಾಗಿ, ಸಂಸದರಾಗಿ, ಮಂತ್ರಿಗಳಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಜೊತೆಗೆ ಮಹಾರಾಷ್ಟ್ರ ಸರ್ಕಾರ ಮತ್ತು ಅನೇಕ ಸಂಘಸಂಸ್ಥೆಗಳು ಪ್ರಶಸ್ತಿ ಮತ್ತು ಗೌರಗಳನ್ನು ನೀಡಿದ್ದಾರೆ.
    ನನಗೆ ತಿಳಿದ ಮಟ್ಟಿಗೆ ಕನ್ನಡದಲ್ಲಿ ರತ್ನಪ್ಪಣ್ಣ ಕುಂಬಾರರ ಬಗ್ಗೆ ಸಮಗ್ರವಾಗಿ ಅವರ ಜೀವನ ಚರಿತ್ರೆಯನ್ನು ಕಟ್ಟಿಕೊಡುವ ಯಾವ ಪುಸ್ತಕವು ಪ್ರಕಟವಾಗಿಲ್ಲ. ಆದರೆ ಕುಂಬಾರರ ಕೆಲ ಪತ್ರಿಕೆಗಳಲ್ಲಿ ಮತ್ತು ಇತರೆ ಪತ್ರಿಕೆಗಳಲ್ಲಿ ಕೆಲವೊಂದು ಲೇಖನಗಳು ಪ್ರಕಟವಾಗಿವೆ. ರತ್ನಪ್ಪಣ್ಣರವರ ಸಂಪೂರ್ಣ ಜೀವನ ಚರಿತ್ರೆಯನ್ನು ಕಟ್ಟಿಕೊಡಲು ಲೇಖಕರು ಇಲ್ಲಿ ಶ್ರಮಿಸಿದ್ದಾರೆ. ನಮ್ಮ ಈ ಮಹಾನ್ ವ್ಯಕ್ತಿಯ ಜೀವನ ಚರಿತ್ರೆಯನ್ನು ನಮ್ಮ ನಾಡಿನ ಎಲ್ಲಾ ಕುಂಬಾರರು ತಿಳಿದುಕೊಳ್ಳಲೇಬೇಕು. ಇವರ ಜೀವನ ಚರಿತ್ರೆಯ ಪುಸ್ತಕ ನಮ್ಮ ಮನೆಗಳಿಗೆ ಕಳಶ ಇದ್ದಂತೆ, ನಮ್ಮ ಯುವ ಜನಾಂಗಕ್ಕೆ ಸ್ಪೂರ್ತಿ, ಚೈತನ್ಯವನ್ನು ನೀಡುವ ಭಗವದ್ಗೀತೆ. ಗದಿಗಿನ ಡಾ. ಎಂ.ಎಂ. ಕಲಬುರ್ಗಿ ಅಧ್ಯಯನಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದೆ. ಅಲ್ಲಿ ಪುಸ್ತಕಗಳ ಸಿಗುತ್ತವೆ. ಪುಸ್ತಕದ ಬೆಲೆ ಕೇವಲ 60ರೂಪಾಯಿ. ನಾಡಿನ ಪ್ರಸಿದ್ಧ ಪುಸ್ತಕ ಅಂಗಡಿಗಳಲ್ಲಿಯೂ ಸಹ ದೊರೆಯುತ್ತದೆ. ಬೆಂಗಳೂರಿನಲ್ಲಿರುವ ಕುಂಬಾರರು ಪುಸ್ತಕಕ್ಕೆ ನನ್ನನ್ನು ಸಂಪರ್ಕಿಸಬಹುದು.(7892358935)

ಕುಬೇರ ಕುಂಬಾರ

ಭಾನುವಾರ, ಫೆಬ್ರವರಿ 19, 2017

ಸರ್ವಜ್ಞ: ಮರುದರ್ಶನ ಭಾಗ –2

 ಸರ್ವಜ್ಞ: ಮರುದರ್ಶನ ಭಾಗ –2


ಕಲ್ಯಾಣ ಕ್ರಾಂತಿಯ ಭಾಗವಾದ ಜಾತಿ, ವರ್ಣವ್ಯವಸ್ಥೆ ಮತ್ತು ಮೌಡ್ಯ ಆಚಾರಣೆಗಳ ವಿರುದ್ದದ ಹೋರಾಟವನ್ನು ವಚನಕಾರರ ನಂತರ ಮುಂದುವರಿಸಿದವನೆಂದರೆ ಅದು ಸರ್ವಜ್ಞ. ಬಸವಣ್ಣನಿಂದ ಒಂದು ಹೊಸ ಸಾಮಾಜಿಕ ವಿರ್ಮರ್ಶೆವೆಂಬ ವಿಶಿಷ್ಟ ಪರಂಪರೆ ಹುಟ್ಟಿಕೊಂಡಿತು. ಇದನ್ನು ಅನೇಕ ಶತಮಾನಗಳ ನಂತರ ಸರ್ವಜ್ಞ ಬಹಳ ತೀರ್ವವಾಗಿ
ಇದನ್ನು ಆಚಾರಣೆಗೆ ತಂದನು. ಅಂದು ಸರ್ವಜ್ಞ ಸಮಾಜಿಕ ಭಕ್ತಿ, ಧರ್ಮ, ಆಚಾರಣೆ, ಮೂಡನಂಬಿಕೆಗಳು, ಸಾಮಾಜ ಘಾತಕಗಳ ವಿರುದ್ಧ ಸೆಣಸಲು ತ್ರಿಪದಿ ಮಾರ್ಗವನ್ನು ಕಂಡುಕೊಂಡನು. ಈ ತ್ರಿಪದಿಗಳ ಮೂಲಕ ತನ್ನ ಅಭಿವ್ಯಕ್ತಿ ಸ್ವತಂತ್ರವನ್ನು ಯಾರ ಮೂಲಾಜಿಲ್ಲದೆ ಹೊರಹಾಕುತಿದ್ದ. ಅಂದಿನ ಸಾಮಾಜಿಕ ಸಮಸ್ಯೆಗಳನ್ನು ತ್ರಿಪದಿಗಳ ಮೂಲಕ ಕಟ್ಟಿಕೊಡುತ್ತಿದ್ದ. ಸಮಾಜದ ಡಾಂಭಿಕತೆಯನ್ನು, ಭಕ್ತಿಯ ಹೆಸರಿನಲ್ಲಿ ಪುರೋಹಿತಶಾಯಿಗಳು ನೆಡೆಸುತಿದ್ದ ಅನಾಚರಗಳನ್ನು ತನ್ನ ತ್ರಿಪದಿಗಳ ಮೂಲಕ ವಿಡಂಬಿಸಿ ಅವುಗಳ ಮುಖವಾಡಗಳನ್ನು ಕಳಚುತಿದ್ದ. ಅಂದಿನ ತಟಸ್ಥ ಸಮಾಜವನ್ನು ಎಚ್ಚರಿಸುತ್ತ–ತಿಳಿಹೇಳುತ್ತ ಲೋಕವನ್ನು ಸುತ್ತಿದ. ಹೀಗೆ 12ನೇ ಶತಮಾನದಲ್ಲಿ ಶರಣರು ಪ್ರತಿಪಾದಿಸಿದ ಸಮಾನತೆಯ ಶರಣ ಸಮಾಜವನ್ನು 16–17ನೇ ಶತಮಾನದಲ್ಲಿ ಸರ್ವಜ್ಞ ತನ್ನ ತ್ರಿಪದಿ ಮೂಲಕ ಭದ್ರಪಡಿಸಲು ಪ್ರಯತ್ನಿಸಿದ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸರ್ವಜ್ಞನ ಸ್ಥಾನ ವಿಶಿಷ್ಟವಾದುದು. ಜನಸಮಾನ್ಯರಲ್ಲಿ ಒಂದಾಗಿ ಕಾವ್ಯವನ್ನು ರಚಿಸಿದ್ದರಿಂದಲೇ ನಮ್ಮ ನಡುವೆ, ನಮ್ಮ ಬದುಕಿನ ಭಾಗವಾಗಿ ಹಾಗಾಗ ಕಾಣಿಸಿಕೊಳ್ಳುತ್ತಲ್ಲೇ ಇರುತ್ತಾನೆ. ಇವನ ಕಾವ್ಯದಲ್ಲಿ ಏನಿದೆ ಎಂದು ಕೇಳುವುದಕ್ಕಿಂತ ಏನಿಲ್ಲ ಎಂಬುದನ್ನು ಕೇಳಬೇಕು. ಲೌಕಿಕ, ಆಧ್ಯಾತ್ಮ ವಿಷಯಗಳನ್ನು ಚರ್ಚಿಸಿದ್ದಾನೆ, ವಿಜ್ಞಾನ–ವೈಜ್ಞಾನಿಕ–ವೈದ್ಯಕೀಯ ವಿಷಯಗಳನ್ನು ತಿಳಿಸಿದ್ದಾನೆ. ಸಾಮಾಜಿಕ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾನೆ. ಲೋಕಜ್ಞಾನಗಳನ್ನು, ಕಾಲಜ್ಞಾನಗಳನ್ನೂ ಹೇಳಿದ್ದಾನೆ. ಇತಂಹ ಗಹನವಾದ ವಿಷಯಗಳನ್ನು ಸರಳ ಮತ್ತು ಸುಲಭವಾಗಿ ವರ್ಣಿಸಿರುವುದು ಅವನ ವಿಶೇಷ.
ಸರ್ವಜ್ಞ ತನ್ನ ತ್ರಿಪದಿ ಎಂಬ ಮೂರು ಸಾಲುಗಳ ಮೂಲಕ ಬದುಕಿನ ಒಳಿತ ಕೆಡುಕುಗಳ ಬಗ್ಗೆ ಮನಮುಟ್ಟುವಂತೆ ಹೇಳಿರುವುದನ್ನು ಮುನ್ನೂರು ಸಾಲುಗಳಲ್ಲಿ ಹೇಳಬಹುದಾದ–ಬರೆಯಬಹುದಾದ ಅರ್ಥವನ್ನು ತುಂಬಿದ್ದಾನೆ. ತಾನು ನಂಬಿದ ಮೌಲ್ಯ ಹಾಗೂ ಸತ್ಯಗಳನ್ನು ಜಗದ ಮುಂದೆ ಇಡಲು ಎಂದೂ ಹಿಂದೆ–ಮುಂದೆ ನೋಡಲಿಲ್ಲ. ಸತ್ಯದ ಸಾಕ್ಷಾತ್ಕಾರಕ್ಕಾಗಿ ಸಮಾಜದ ಎಲ್ಲಾ ಮೌಢ್ಯಗಳನ್ನು, ಧರ್ಮದ ಪ್ರಖಂಡ ರೂಪಗಳನ್ನು ಹಾಗು ಜಡ್ಡುಗಟ್ಟಿದ ಮೌಲ್ಯಗಳನ್ನು ಪ್ರಶ್ನಿಸುತ್ತಿದ್ದ. ಇವನ ಚಿಂತನೆಗಳ ಹರಹು ಕೂಡಾ ತುಂಬಾ ವಿಸ್ತಾರವಾದುದು, ಅಂತರಂಗದ ಅಭಿವ್ಯಕ್ತಿಯಿಂದ ಹಿಡಿದು, ಸಾಮಾಜಿಕ ವಲಯದ ಎಲ್ಲಾ ಮಗ್ಗಲುಗಳನ್ನು ಆತ ಲಕ್ಷಿಸಿದ್ದಾನೆ. ಸಾಮಾಜಿಕ, ಆರ್ಥಿಕ ಧಾರ್ಮಿಕ ಸಮಸ್ಯೆಗಳನ್ನು ಕುರಿತು ಚಿಂತಿಸಿರುವ ಪರಿ ವಿಶಿಷ್ಟವಾದುದು. 
ಕೇಳಸಮುದಾಯದ ಪ್ರಸಿದ್ದ ವ್ಯಕ್ತಿಗಳು ಜೀವನ ಚರಿತ್ರೆಗಳು ಪುರಾಣಗಳಿಂದ ತುಂಬಿಕೊಳ್ಳುತ್ತವೆ. ಇಂಥ ಕೆಲಸ ನಡೆದಾಗ ಅಲ್ಲಿ ಸತ್ಯ–ಮಿಥ್ಯಗಳ ಪ್ರಶ್ನೆಯನ್ನು ಕೇಳಲಾಗದು ಅಥವಾ ಭಿನ್ನವಾಗಿ ಕೇಳಬೇಕಾಗುತ್ತದೆ. ಇಂತಹ ಕಪೋಕಲ್ಪಿತ ಇತಿಹಾಸವನ್ನು ಮತ್ತು ಪುರಾಣವನ್ನು ಸರ್ವಜ್ಷನ ಮೇಲೆ ಸೃಷ್ಟಿಸಲಾಗಿದೆ. ಇದರಲ್ಲಿ ನಡೆದದ್ದೆಷ್ಟು, ಕಲ್ಪಿಸಿಕೊಂಡದ್ದೆಷ್ಟು ಎಂದು ಪ್ರಶ್ನಿಸುವುದು ಸಾಧ್ಯವಾಗಲಾರದೊಷ್ಟು ಸೃಷ್ಟಿಸಲಾಗಿದೆ. ಕಪೊಕಲ್ಪಿತದ ಬಹುಪಾಲು ಬರಹಗಳು ಎಲ್ಲರಿಗೂ ಪರಿಚಿತವಾಗುವಂತೆ ಒಂದು ಕಥಾನಕವನ್ನು ಸ್ವಲ್ಪ ಹೆಚ್ಚು ವ್ಯವಸ್ಥಿತವಾಗಿ ಹೆಣೆಯಲಾಗಿದೆ. ಇವು ಎಷ್ಟು ಪ್ರಭಾವಶಾಲಿಯಾಗಿವೆಯೆಂದರೆ ಅವುಗಳನ್ನು ಭೌತಿಕ ಸತ್ಯಗಳೆಂದೇ ಗುರುತಿಸಬೇಕಾಗುತ್ತದೆ ಅಥವಾ ಒಪ್ಪಿಕೊಳ್ಳಬೇಕಾಗುತ್ತದೆ.
ಸರ್ವಜ್ಞ ಎಂಬ ಈ ಮಹಾನ್‌ ವ್ಯಕ್ತಿಯನ್ನು ನಾವು ವರ್ತಮಾನದಲ್ಲಿ ಪ್ರತಿ ನಿರ್ಧಿಕರಿಸಿಕೊಳ್ಳಬೇಕಾಗಿದೆ. ಕಳಂಕ ಮುಕ್ತ ಸರ್ವಜ್ಞ ಮಾಡಬೇಕಾದ ಅನಿವಾರ್ಯತೆ ಇಂದು ನಮಗೆ ಇದೆ. ಸರ್ವಜ್ಞನನ್ನು ಒಂದು ಜಾತಿಯ ಚೌಕಟ್ಟಿನ ಒಳಗೆ ತಂದು ನಿಲ್ಲಿಸುವುದು ಅಷ್ಟು ಸಮಂಜಸವಲ್ಲದಿದ್ದರು, ಕುಂಬಾರ ಸಮುದಾಯದ ಐಕಾನ್‌ ಆಗಿ ಇಟ್ಟುಕೊಂಡು ಸುಮುದಾಯದ ಒಕ್ಕಟ್ಟು ಅಥಾವ ಒಗ್ಗೂಡುವಿಕೆ ಮತ್ತು ಅಭಿವೃದ್ದಿಯ ಜೊತೆಗೆ ಅವನಿಗೆ ಅಂಟಿರುವ ಕಳಂಕವನ್ನು ತೊಳೆಯಬೇಕಾಗಿದೆ. ಕಪೊಕಲ್ಪಿತ ಇತಿಹಾಸವನ್ನು ಒಪ್ಪಿಕೊಂಡು ಹಾರ–ತುರಾಹಿ ಮತ್ತು ಆಸನಗಳಿಗಾಗಿ ತಮ್ಮ ತನವನ್ನು ಒಪ್ಪಿಸಿಕೊಳ್ಳದೆ ಇದರ ವಿರುದ್ಧ ಪ್ರತಿಭಟಿಸುವ ಮನೋಭಾವವನ್ನು ಕುಂಬಾರ ಸಮುದಾಯದ ಜನಗಳು ಬೆಳಸಿಕೊಳ್ಳಬೇಕು. 
ಸರ್ವಜ್ಞನ ಹುಟ್ಟಿನ ಕಥೆ ಕಲ್ಪಿತ ಕಥೆಯಾಗಿದ್ದು, ಕಟ್ಟುಕಥೆಯಾಗಿದ್ದು, ಅವನ ಜ್ಞಾನ ಸಹಿಸಲಾರದವರು ಕುಚೋಧ್ಯತನದಿಂದ ಮತ್ತು ಅವನ ನೇರ ನಿಷ್ಠುರ ಮಾತುಗಳಿಂದ ಈ ಕಟ್ಟು ಕಥೆಗೆ ಕಾರಣವಾಗಿದೆ. ನಿಂಗಪ್ಪ ಚಳಗೇರಿಯವರು ವಿಚಾರದಂತೆ ಬ್ರಾಹ್ಮಣರಲ್ಲಿ ಬಸವನೆಂಬ ನಾಮ ವಾಚಕ ಇರುವುದಿಲ್ಲ ಎಂದು ಹೇಳಿದ್ದಾರೆ. ಬಸವರಸ ಒಂದೇ ರಾತ್ರಿಯಲ್ಲಿ ಮಾಳಿಯೊಂದಿಗೆ ಕೂಡುವ ಪ್ರಸಂಗವೇಕೆ ಬಂತು ಎಂಬ ಪ್ರಶ್ನೆಯನ್ನು ನಮ್ಮಲ್ಲಿ ಹುಟ್ಟಿಹಾಕಿಕೊಳ್ಳಬೇಕಾಗಿದೆ. ಮಾಳಿ ತಂದೆ ಸ್ವಂತಃ ಮಗಳು ಬಾಲವಿಧುವೆಯನ್ನು ಬಸವರಸನಿಗೆ ಒಪ್ಪಿಸಿದ ಕಥೆ ಸರ್ವಜ್ಞನ ಅಕ್ಕನ ಕಥೆ, ಸರ್ವಜ್ಞ ಪರಮಾರ್ಥಗಳ ಅರ್ಧದ್ವಂದ್ವ, ವೆಂಕನ ಓಲೆ ಇವೆಲ್ಲಾ ಕಪೋಲಕಲ್ಪಿತ, ಉಚ್ಚವರ್ಣಿಯರ ಕೈವಾಡವೆಂದು ದೇಶಪಾಂಡೆ ಮನೋಹರರಾಯರು ಅಭಿಪ್ರಾಯಪಡುತ್ತಾರೆ. ಸಾಮಾನ್ಯವಾಗಿ ತೀರ್ಥಯಾತ್ರೆ, ದೇವ ದರ್ಶನಕ್ಕೆ ಹೋದರೆ ಹೆಂಡರು ಮಕ್ಕಳನ್ನು ಕರೆದೊಯ್ಯುವ ರೂಡಿ ಆದರೆ ಬಸವರಸ ಒಬ್ಬನೇ ಹೋದ, ಪ್ರಸಾದ ಕುಂಬಾರ ಮಾಳಿಗೆ ಕೊಟ್ಟ ಎಂಬುವುದು ಚಿಂತನೆಗೆ ಎಡೆಮಾಡುತ್ತದೆ. 
ಸರ್ವಜ್ಞನನ ವಚನಗಳಲ್ಲಿ ಗುರುವಿನ ಬಗ್ಗೆ ಸಾಕಷ್ಟು ವಚನಗಳಿದ್ದು ಧರ್ಮ–ಕರ್ಮಗಳ ಸೂಕ್ಷ್ಮತೆಯನ್ನು,  ಆಳ–ಅಗಲವನ್ನು, ಜೀವದ ವೈವಿಧ್ಯತೆಯನ್ನು,ಅನುಭವದ ಅಗಾಧ ಪಾಂಡಿತ್ಯವನ್ನು ವಚನಗಳಲ್ಲಿ ಕಾಣುತ್ತೇವೆಂದರೆ ಗುರುಗಳ ಮಾರ್ಗದರ್ಶನ ಇರಲೇಬೇಕು. ಇವನು ಸೋಮಶಂಕರ ಎಂಬ ಗುರುವಿನಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರಸ್ತಾಪ ನಂಜೇಗೌಡರ ಸಂಪಾದಕದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಾಡಲಾಗಿದೆ. ಸಂಶೋಧಕರಾದ ವಿ.ರ.ಕೊಪ್ಪಳ ಅವರು, ಉತ್ತಂಗಿ ಚೆನ್ನಪ್ಪನವರ ‘‘ಸರ್ವಜ್ಞ ವಚನಗಳ ಕಿರಿಯಾವೃತ್ತಿ’’ (1947)ಗೆ ಪ್ರಸ್ತಾವನೆ ಬರೆಯುತ್ತ ‘‘ಕುಂಬಾರ ಪಂಗಡಕ್ಕೆ ಮುಖಂಡನೆನಿಸಿ ಪಂಡಿತನೆನಿಸಿದ ಮಾಸೂರು ಬಸವರಸನು ದಕ್ಷಿಣದ ಕಾಶಿ ಎನಿಸಿದ ಹಂಪೆಯ ಈಶನಿಂದ ಮಕ್ಕಳ ವರ ಪ್ರಸಾದವನ್ನು ಪಡೆದುಕೊಂಡು ಅದನ್ನು ತವರೂರಿನಲ್ಲಿದ್ದ ಮಲ್ಲಮ್ಮನಿಗೆ ನೀಡಿದನು, ಅದರ ಫಲವಾಗಿ ಸರ್ವಜ್ಞನು ಜನಿಸಿದನು’’ ಎಂದು ಅಂದೆ ಅವರು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೊಬ್ಬ ಪ್ರಸಿದ್ದ ಸಂಶೋಧಕರಾದ ಮತ್ತು ಸರ್ವಜ್ಞನ ಜೀವನ ದೇಶಾದಿಗಳ ಬಗೆಗೆ ವಿಶೇಷವಾದ ಸಂಶೋಧನೆ ಮಾಡಿರುವ ಶ್ರೀ ಜಿ.ಎಂ. ಉಮಾಪತಿ ಶಾಸ್ತ್ರಿಗಳು, ಮೈಸೂರು ಪ್ರಾಚ್ಯವಿದ್ಯಾ ಸಂಶೋಧನಾಲಯದ ಸರ್ವಜ್ಞನ ಕೈಬರಹದ ಹೊತ್ತಿಗೆಯೊಂದರಲ್ಲಿರುವ, 
                                    "ತಂದೆ ಕುಂಬಾರ ಮಲ್ಲ, ತಾಯಿ ಮಳಲಾದೇವಿ
                          ಇಂದು ಶೇಖರನ ವರಪುತ್ರ ಧರಣಿಗೆ ಬಂದು
                   ಜನಿಸಿದ ಸರ್ವಜ್ಞ’’ ಎಂಬ ತ್ರಿಪದಿಯ ಆಧಾರದ ಮೇಲೆ ಹಾಗೂ ಇವನ ಬಹುತೇಕ ತ್ರಿಪದಿಗಳಲ್ಲಿ ಬಂದು ಸುಳಿಯುವ ಕುಂಬಾರ  ಪದಗಳಿಂದ ಹಾಗು ಕುಂಬಾರನ ಚಿತ್ರಣಗಳು ಹೆಚ್ಚಚ್ಚಾಗಿ ಬರುವುದರಿಂದ ಮತ್ತು ಈ ವಚನ ಅವನದೇ ಅಗಿರುವುದರಿಂದ ಈತ ಕುಂಬಾರ ದಂಪತಿಗಳ  ಮಗನಾಗಿ ಹುಟ್ಟಿದವನೆಂದು ಕುಂಬಾರ ಮಲ್ಲಯ್ಯ ಮತ್ತು ಮಳಲಾದೇವಿಯರು ತಂದೆ–ತಾಯಿಗಳೆಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗೆಯೇ ಮುಂದುವರೆದು ಅವರು ಪುರಾತನ ಶಿವಶರಣ ಕುಂಬಾರ ಗುಂಡಯ್ಯನ ಕುಲದವನಾಗಿದ್ದಿರಬಹುದೆಂದು ಊಹಿಸಲು ಬರುವಂತಿದೆ ಎಂದೂ ‘ಸರ್ವಜ್ಞನು ಕುಂಬಾರ ದಂಪತಿಗಳಿಗೆ ಹುಟ್ಟಿದವನೆಂದು ತಿಳಿಸಿದ್ದಾರೆ. ಹೀಗೆ ಅನೇಕ ವಿದ್ವಾಂಸರು, ಸಂಶೋಧಕರು ಈ ಕಟ್ಟುಕಥೆಯ ವಿರುದ್ಧ ಧ್ವನಿ ಎತ್ತಿದ್ದಾರೆ ಹಾಗು ಪ್ರತಿಭಟಿಸಿದ್ದಾರೆ. 
ಕಪೋಕಲ್ಪಿತ ತ್ರಿಪದಿಗಳ ಮೂಲಕ ಸರ್ವಜ್ಞನನಿಗೆ ವ್ಯಕ್ತಿತ್ವದ ಗುಣಗಳನ್ನು ಕಟ್ಟಿಕೊಡಲಾಗಿದೆ. ಈ ವ್ಯಕ್ತಿಯ ಬಗೆಗೆ ವ್ಯಕ್ತವಾಗಿರುವ ಇತಂಹ ಅಮೂರ್ತ ಗುಣಗಳ ಆಧಾರದ ಮೇಲೆ ಮೂರ್ತರೂಪ ಕೊಡಲಾಗಿದೆ. ಇನ್ನೂ ಹೆಚ್ಚಿನ ಸಂಶೋಧನೆ ನಡೆಸಿ ಈ ಸರ್ವಜ್ಞನ ಈ ಕಲ್ಪಿತ ಕಟ್ಟುಕಥೆಯ ರೂಪವನ್ನು ಕಳಚಬೇಕಾಗಿದೆ. 
ಕರ್ನಾಟಕ ಸರ್ಕಾರ ಕುಂಬಾರ ಜನಾಂಗದವರನ್ನು ಮತ್ತು ಕುಂಬಾರ ಸಂಘಟನೆಗಳಿಗೆ ಸರ್ವಜ್ಞ ಜಯಂತಿಗೆ  ಆಹ್ವಾನಿಸುತ್ತಿದೆಯಾದರೂ, ಸರ್ವಜ್ಞನ ಚರಿತ್ರೆ ಬಗ್ಗೆ ಹೇಳುವಾಗ ಈ ಕಟ್ಟು ಕಥೆಯನ್ನು ಪ್ರಚಾರ ಪಡಿಸಲಾಗುತ್ತಿದೆ ಮತ್ತು ವಾಚಿಸಲಾಗುತ್ತಿದೆ. ಕುಂಬಾರ ಜನಾಂಗದವರು ಒಂದಾಗಿ ಇದರ ವಿರುದ್ಧ ಧ್ವನಿ ಎತ್ತಿ ಪ್ರತಿಭಟಿಸಬೇಕು, ಹಾಗು ಸರ್ವಜ್ಞನ ಜನ್ಮಸ್ಥಳ ಮತ್ತು ಕರ್ಮಸ್ಥಳಗಳಾದ ಹಾವೇರಿ ಜಿಲ್ಲೆಯ, ಹಿರೇಕೆರೂರು ತಾಲೂಕಿನ ಮಾಸುರು ಮತ್ತು ಅಬಲೂರು ಗ್ರಾಮಗಳಲ್ಲಿ ಸರ್ವಜ್ಞನ ಸಮಾಧಿ, ಆರಾಧಿಸಿದ ದೇವಸ್ಥಾನ ಹಾಗು ಇನ್ನಿತರ ಐತಿಹಾಸಿಕ ಹಿನ್ನೆಲೆವುಳ್ಳ ಸ್ಥಳಗಳು ಅನಾಥವಾಗಿ ಪಾಳು ಬಿದ್ದಿವೆ. ಈ ಸ್ಥಳಗಳನ್ನು ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮೂಲಕ ಅಭಿವೃದ್ಧಿ ಪಡಿಸಬೇಕು ಮತ್ತು ಸರ್ವಜ್ಞ ಅಧ್ಯಯನ ಪೀಠ, ಗ್ರಂಥಾಲಯ ಸ್ಥಾಪಿಸಿ ಸರ್ವಜ್ಞನ ವಚನ ಸಾಹಿತ್ಯ ಎಲ್ಲೆಡೆ ಪಸರಿಸುವಂತೆ ಮಾಡಬೇಕು ಎಂದು ವೇದಿಕೆ ಹಂಚಿಕೊಂಡವರು ಪ್ರಸ್ತಾಪಿಸಬೇಕು.
ಎಲ್ಲ ನನ್ನ ಬಂಧುಗಳಿಗೆ ಕುಂಬಾರ ಸರ್ವಜ್ಞ ಜಯಂತಿಯ ಶುಭಾಶಯಗಳು.

ಕುಬೇರ ಕುಂಬಾರ
ನಿಮ್ಮ ಸಲಹೆ– ಸೂಚನೆಗಳನ್ನು ಮತ್ತು ಚರ್ಚೆಗಳು ಇದ್ದರೆ kuberkp@gmail.com ಗೆ ಕಳಿಸಿಕೊಡಬೇಕು.

ಗ್ರಂಥ ಋಣಿ 
1. ಸರ್ವಜ್ಞನ ಸಾಹಿತ್ಯ ಕುರಿತು ಅಧ್ಯಯನಗಳು..... ಸಂಪಾದಕ....ಡಾ. ವೀರೇಶ ಬಡಿಗೇರ.....ಕನ್ನಡ ವಿಶ್ವವಿದ್ಯಾಲಯ
2. ಸರ್ವಜ್ಞ: ತೌಲನಿಕ ಅಧ್ಯಯನಗಳು....ಸಂಪಾದಕ....ಡಾ. ಪಿ. ಮಹಾದೇವಯ್ಯ.....ಕನ್ನಡ ವಿಶ್ವವಿದ್ಯಾಲಯ
3. ಸರ್ವಜ್ಞನ ವಚನಗಳು........ಸಂಪಾದಕ...ಡಾ. ಎಲ್‌. ಬಸವರಾಜು
4. ಪರಮಾರ್ಥ (ಸರ್ವಜ್ಞನ ವಚನಗಳು).....ಸಂಪಾದಕ...ಡಾ. ಎಲ್‌. ಬಸವರಾಜು
5. ಸರ್ವಜ್ಞಮೂರ್ತಿಯ ವಚನಗಳು.......ಸಂಪಾದಕ....ಜಿ.ಎಂ, ಉಮಾಪತಿ ಶಾಸ್ತ್ರಿ
6. ದಕ್ಷಿಣದ ಸಂತ ಕವಿಗಳು.....ಡಾ. ಕೆ.ವಿ ಬ್ಯಾಳಿ
7. ಸರ್ವಜ್ಞ ವಚನ ಸಂಗ್ರಹ.....ಸಂ. ರುದ್ರಮೂರ್ತಿಶಾಸ್ತ್ರಿ
8. ವಚನ ಸಾಹಿತ್ಯ ಸಂವಾದ....ಪ್ರಕಾಶ ಪ್ರಜಾವಾಣಿ

ಭಾನುವಾರ, ಫೆಬ್ರವರಿ 21, 2016

ಸರ್ವಜ್ಞ: ಮರುದರ್ಶನ–1


       ಸರ್ವಜ್ಞ: ಮರುದರ್ಶನ–1


ಸರ್ವಜ್ಞನನ್ನು ಒಂದು ರೀತಿ ಮರು ಅವಲೋಕನಕ್ಕೆ ಒಡ್ಡಾಬೇಕಾಗಿದೆ, ಮರು ಸ್ಥಾಪನೆ ಮಾಡಬೇಕಾಗಿದೆ. ಅದು ನಮ್ಮ ಜನಾಂಗದ ಚೌಕಟ್ಟಿನಲ್ಲಿ ಇಟ್ಟು ನೋಡಬೇಕಾಗಿದೆ, ಅವಲೋಕನ ಮಾಡಬೇಕಾಗಿದೆ ಮತ್ತು ಮರುದರ್ಶನ ಮಾಡಬೇಕಾಗಿದೆ. ಸರ್ವಜ್ಞನನ್ನು ಒಂದು ಜನಾಂಗದ ಚೌಕಟ್ಟಿನಲ್ಲಿ ಇಟ್ಟು ನೋಡುವುದು ಅಷ್ಟು ಸಂಜಸವಲ್ಲದಿದ್ದರು, ಅದು ಇಂದು ನಮಗೆ ಅನಿವರ್ಯವಾಗಿದೆ. ಈ ಹಿಂದೆ ಮತ್ತು ಇಲ್ಲಿಯವರೆಗೂ ಪಟ್ಟಬದ್ರ ಹಿತಸಕ್ತಿಗಳು, ಪಟ್ಟಬದ್ರ ಜಾತಿಗಳು ಸರ್ವಜ್ಞನ ವಿಚಾರದಲ್ಲಿ ಇಲ್ಲಸಲ್ಲದ್ದನ್ನು ಸೃಷ್ಟಿಸಿ ಇದನ್ನು ಎಲ್ಲರೂ ಒಪ್ಪುವಂತೆ ಮತ್ತು ಒಪ್ಪಿಕೊಳ್ಳುವಂತೆ ಮಾಡಿಬಿಟ್ಟಿದ್ದಾರೆ. ಒಂದು ಕಡೆ ಜಿ.ಎಸ್‌. ಶಿವರುದ್ರಪ್ಪನವರು ವಾಸ್ತವವಾಗಿ ಅವನ ತಂದೆ–ತಾಯಿ ಹಾಗೂ ಗುರು ಸರ್ವಜ್ಞ ಹುಟ್ಟಿದ್ದು ಹೇಗೆ ಎಂಬುದನ್ನಯ ಹೇಳುವ ತ್ರಿಪದಿಗಳು ಯಾರೋ ಕಟ್ಟಿ ಸೇರಿಸಿದವುಗಳೆಂದು ಅಭಿಪ್ರಾಯ ಪಟ್ಟಿದ್ದಾರೆ. ಮುಂದುವರೆದು ಕುಂಬಾರ ಮಾಳಿಯಲ್ಲಿ ದ್ವಿಜೋತ್ತಮನೊಬ್ಬನಿಗೆ ಹುಟ್ಟಿದವನು ಸರ್ವಜ್ಞ ಎಂಬ ಕತೆಯಲ್ಲಿ ಈ ದೇಶದ ಪ್ರತಿಭೆಯೆಲ್ಲವೂ ಪ್ರತಿಷ್ಠಿತ ವರ್ಣದ ಬೀಜದ ಬೆಳಸು ಎಂಬ ಪರಂಪರಾಗತವಾದ ವರ್ಣಪ್ರತಿಷ್ಠೆಯ ಪ್ರಕ್ಷೇಪ ಇದು ಯಾಕಾಗಿರಬಾರದು ಎಂಬ ಪ್ರಬಲವಾದ ಸಂದೇಹ ಎಂದು ಅಭಿಪ್ರಾಯ ಪಟ್ಟಿದ್ದಾರೆ.

          ಸರ್ವಜ್ಞನ ಬದುಕಿನ ಬಗೆಗೆ ಏನೂ ತಿಳಿಯದೆ ಹೋಗಿರುವಾಗ ಅವನ ಜನನ, ತಂದೆ, ತಾಯಂದಿರ ವಿಚಾರವನ್ನು ಕುರಿತು ಹೇಳುವ ತ್ರಿಪದಿಗಳು ಮಾತ್ರ ಸತ್ಯವೆಂದು ನಂಬುವುದು ಹೇಗೆ, ಉತ್ತಂಗಿ ಚನ್ನಪ್ಪನವರು 1927ರಲ್ಲಿ ಒಟ್ಟು 1928ತ್ರಿಪದಿಗಳನ್ನು ಸಂಕಲನಮಾಡಿ ‘ಸರ್ವಜ್ಞನ ವಚನಗಳು’ ಎಂಬ ಸಂಪುಟವನ್ನು ಪ್ರಕಟಿಸಿದ್ದರು. ಇದರಲ್ಲಿ ಸುಮಾರು 1366 ಸರ್ವಜ್ಞನವೇ ಎಂಬುವುದರಲ್ಲಿ ಸಂಶಯವಿಲ್ಲವೆಂದೂ, ಸುಮಾರು 40–50 ಸಂಶಯಾಸ್ಪದವೆಂದೂ, ಉಳಿದ ಸು. 500 ತ್ರಿಪದಿಗಳು ಖಚಿತವಾಗಿ ಅವನವಲ್ಲವೆಂದು ಹೇಳಿದ್ದರು. ಹಾಗು ಮತ್ತೊಂಬ್ಬ ಸಂಶೋಧಕರಾದ ಶ್ರೀಯುತ ಮಾಳವಾಡರು ಸರ್ವಜ್ಞನೇ ರಚಿಸಿದ ತ್ರಿಪದಿಗಳ ಸಂಖ್ಯೆ ಈಗ ಒಟ್ಟಾರೆ ಪ್ರಕಟವಾದ ಪದ್ಯಗಳಿಗಿಂತ ಬಹುಮಟ್ಟಿಗೆ ಕಡಿಮೆ ಇರಬೇಕೆಂದು ಊಹಿಸಿದರೆ ತಪ್ಪಗಲಾರದು ಎಂದು ಅಂದೇ ಸಂಶಯ ವ್ಯಕ್ತ ಪಡಿಸಿದ್ದರು.

ಕಾಲಕಾಲಕ್ಕೆ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ಪ್ರಕ್ಷಿಪ್ತವಾಗಿ ಅವು ಸಂಖ್ಯೆಯಲ್ಲಿ ಅಧಿಕವಾಗುತ್ತ ಬಂದವು. ಈ ಕ್ರಮದಲ್ಲಿ ನಿಜಪದ್ಯಗಳ ಸಂಖ್ಯೆಗೆ ಸರಿಸಮವಾಗಿ ಪ್ರಕ್ಷಿಪ್ತ ಪದ್ಯಗಳೂ ಬೆಳೆದು ಒಂದರೊಡನೊಂದು ಬೆರೆತು ಲೋಕದೃಷ್ಟಿಗೆ ಅವೆಲ್ಲವೂ ಸರ್ವಜ್ಞನವೇ ಎಂಬ ಭ್ರಾಂತಿಯನ್ನು ಹುಟ್ಟಿಸಿದವು. ಸರ್ವಜ್ಞನ ಜನನ ವೃತ್ತಾಂತವನ್ನೂ ಹೇಳುವ ಈ ತ್ರಿಪದಿಗಳು ಕೈಬರಹದ ಪ್ರತಿಗಳಲ್ಲಿ ಏಕರೂಪವಾಗಿ ಬಂದಿಲ್ಲ, ಇಲ್ಲಿ ಬ್ರಾಹ್ಮಣತ್ವವನ್ನು ಎಲ್ಲಿಂದಲೊ ತಂದು ತುರಿಕಿದವು ಎಂದು ಮೇಲನೋಟಕ್ಕೆ ಗೋತ್ತಾಗುತ್ತದೆ. ಸರ್ವಜ್ಞನನೂ ತನ್ನ ಹುಟ್ಟಿನ ವೃತ್ತಾಂತದ ಬಗ್ಗೆ ಹೇಳುವ ತ್ರಿಪದಿ ಮತ್ತು ತನ್ನ ತಾಯಿ ಬಗ್ಗೆ ಹೇಳುವ ತ್ರಿಪದಿ ‘ಲಂಡೆ ಮಾಳ್ವೆಯೊಳು ಜನಿಸಿ’ ಎನ್ನುವ ಮತ್ತು ‘ಕುಂಬಾರಸಾಲೆಯಲ್ಲಿ ಇಂಬಿನ ಮೊಳಿಯೊಳು ಬಸವರಸ ನಿಂಬಿಟ್ಟನೆನ್ನ’ ಎಂದು ಹೇಳುವ ತ್ರಿಪದಿಗಳು ಸರ್ವಜ್ಞನನೇ ರಚಿಸಿದ ತ್ರಿಪದಿಗಳು ಎಂದು ಹೇಳಲು ಸಾಧ್ಯವಿಲ್ಲ, ತನ್ನ ತಂದೆ–ತಾಯಿಂದಿರ ಪ್ರಣಯದ ಸಂಗತಿಯನ್ನು ಮಗನಾದವನೂ ಹೇಳುವುದು ತೀರ ಅಸಂಭವವೆನ್ನಿಸುತ್ತದೆ, ತನ್ನ ತಾಯಿ ಬಗ್ಗೆ ಸರ್ವಜ್ಞ ಇಷ್ಟೊಂದು ಹೀನವಾಗಿ ಹೇಳಿದ್ದರೆ ಅವನು ಹೆಣ್ಣಿನ ಬಗ್ಗೆ ಇರುವ ಗೌರವವನ್ನು, ಪ್ರೀತಿಯನ್ನು ಹೋಂದಿರಲೂ ಹೇಗೆ ಸಾಧ್ಯ, ತನ್ನ ತಾಯಿ ನಡೆತೆ ಕಟ್ಟದ್ದು, ಅಂಸಪ್ರದಾಯಕವಾಗಿ ಹುಟ್ಟಿಸಿದಳು ಎಂದು ಹೇಳುವಾಗ  
                  ‘ನಡೆವುದೊಂದೆ ಭೂಮಿ! ಕುಡಿವುದೊಂದೆ ನೀರು 
                 ಸುಡುವಗ್ನಿಯೊಂದೆ ಇರುತ್ತಿರಲು ಕುಲಗೋತ್ರ
          ನಡುವೆ ಎತ್ತಣದು ಸರ್ವಜ್ಞ‘  ಮತ್ತು ಇಂಥಹ ಅನೇಕ ಜಾತಿಯನ್ನು, ಕುಲ–ಗೋತ್ರವನ್ನು ಖಂಡಿಸಿ ಹೇಳುವ ತ್ರಿಪದಿಗಳನ್ನು ಸರ್ವಜ್ಞ ಹೇಗೆ ಬರೆಯಲು ಸಾಧ್ಯ? ಹಾಗಾದರೆ ಸರ್ವಜ್ಞನ ಜನ್ಮವೃತ್ತಾಂತ ಜಾತಿಗಳನ್ನು, ಕುಲವನ್ನು, ಗೋತ್ರಗಳನ್ನು ಮಿರಿದ್ದು ಅಲ್ಲವೆ, ತನ್ನ ಜನ್ಮ ವೃತ್ತಾಂತವನ್ನು ಖಂಡಿಸಿದ್ದಾದರೆ ಜಾತಿ–ಕುಲದ ಆಚಾರಣೆಯನ್ನು ಹೇಗೆ ಖಂಡಿಸಿದ, ಎಂಬ ಅನೇಕ ಪ್ರಶ್ನೆಗಳು ಹುಟ್ಟುತ್ತವೆಲ್ಲವೆ. 

ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಿಷಯವಿಲ್ಲ ಎಂಬ ನಾಣ್ನುಡಿಯಂತೆ ಸರ್ವಜ್ಞನು ಈ ವಿಶ್ವದ ವಿಷಯಗಳನ್ನೆಲ್ಲ ಕ್ರೋಡಿಕರಿಸಿ ಹೇಳುವ ಪ್ರಯತ್ನ ಮಾಡಿದ್ದಾನೆ. ಸರ್ವಜ್ಞ ಎಂಬ ಶಬ್ದವೇ ಸೊಚಿಸುವಂತೆ ಅವನು ಎಲ್ಲ ಬಲ್ಲವನು, ವಿವಿಧ ಶಾಸ್ತ್ರಗಳಲ್ಲಿ ಪರಿಣಿತಿಯನ್ನು ಹೋಂದಿದ್ದ, ಆಳವಾದ ತತ್ವ ಚಿಂತನೆಗಳನ್ನು ಹೊಂದಿದ್ದ, ವೈದ್ಯಶಾಸ್ತ್ರ, ಆಹಾರಶಾಸ್ತ್ರ, ತಂತ್ರಜ್ಞಾನಶಾಸ್ತ್ರ, ಮನಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಧರ್ಮ, ಇತಹಾಸ, ವೈಚಾರಿಕತೆ ಹಾಗು ವೇದ–ಉಪನಿಷತ್ತುಗಳಲ್ಲಿ ಮತ್ತು ಮುಂತಾದ ವಿಷಯಗಳಲ್ಲಿ ಆಪಾರವಾದ ಜ್ಞಾನವನ್ನು ಪಡೆದಿದ್ದನು ಎಂಬುವುದನ್ನು ಅವನ ತ್ರಿಪದಿಗಳಿಂದ ತಿಳಿದು ಬರುತ್ತದೆ.
ವಿದ್ಯವುಳ್ಳವನ ಮುಖವು ಮುದ್ದು ಬರುವಂತಿಕ್ಕು
ವಿದ್ಯವಿಲ್ಲದವನ ಬರಿಮುಖವು ಹಾಳೂರ
ಹದ್ದಿಂತಿಕ್ಕೂ ಸರ್ವಜ್ಞ ಎಂಬ ತ್ರಿಪದಿಯಲ್ಲಿ  ಜ್ಞಾನದ ಮಹಾತ್ವವನ್ನು ಹೇಳಿದ್ದಾನೆ. ಹಾಗು ಜ್ಞಾನಿ ತನ್ನ ಮೌನದಿಂದ, ಮೂರ್ಖ ತನ್ನ ಮಾತಿನಿಂದ ಪ್ರಕಟಗೊಳ್ಳುತ್ತಾನೆ. ಸರ್ವಜ್ಞ ಸತ್ಯಸಾಕ್ಷತ್ಕಾರಕ್ಕಾಗಿ ಶುದ್ಧ ಜ್ಞಾನವನ್ನು ಸಂಪಾದಿಸುವವರನ್ನು ಇಷ್ಟಪಡುತ್ತಿದ್ದ. ಎಲ್ಲ ಜನರ ಲೇಸಗಾಗಿ ಅವನು ಒತ್ತಿ ಹೇಳುವ ಮೊದಲನೆಯ ಸಂಗತಿಯೆಂದರೆ ಗುರುವಿನ ಆವಶ್ಯಕತೆ, ಗುರುವಿಲ್ಲದೆ ಉದ್ದಾರವಿಲ್ಲ, ಗುರುವೇ ದೇವರೆಂದು ಗುರು ಸೇವೆಯಲ್ಲಿ ಮಾನವನ  ಸಮಸ್ಯೆಗಳ ಏಕಮೇವ ಪರಿಹಾರವುಂಟೆಂದು ಅವನು ಮತ್ತೆ ಮತ್ತೆ ಘೋಷಿಸುವಾಗ, ಹೇಗೆ ಸರ್ವರೊಳಗೊಂದು ವಿದ್ಯಕಲಿತ, ಹೇಗೆ ಹಿಂಡನ್ನಾಗಲಿದ ಗಜದಂತೆ ಊರು–ಊರು ಸುತ್ತಿ ಜ್ಞಾನಾರ್ಜನೆಮಾಡಿಕೊಂಡ. ಗುರುವಿನ ಬಗ್ಗೆ ಉದ್ದಾತ್ತವಾದ ಮನೊಭಾವನೆ ಹೊಂದಿರಬೇಕಾದರೆ , ಇಷ್ಟೆಲ್ಲ ಜ್ಞಾನ ಸಂಪಾದನೆಯಾಗಬೇಕಾದರೆ ಅವನಿಗೆ ಬಾಲ್ಯದಲ್ಲಿ ಒಳ್ಳೆಯ ವಾತವಾರಣ, ಉತ್ತಮವಾದ ಶಿಕ್ಷಣ ಸಿಕ್ಕಿರಲೇಬೇಕಲ್ಲವೆ, ಜ್ಞಾನಿಯಾದ ಒಬ್ಬ ಗುರುವಿನಿಂದ ಶಿಕ್ಷಣ ದೊರಕಿರಬೇಕಲ್ಲವೆ. ಶಿಕ್ಷಣದ ಭದ್ರವಾದ ಬೂನಾದಿ ಬಾಲ್ಯದಲ್ಲೆ ಬಿದ್ದಿರಬೇಕು, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತ್ತೆ ಎಂಬ ಗಾದೆಯಂತೆ ಅವನು ಯ್ವೌವನದಲ್ಲಿ ಅಥವಾ ಪ್ರೌಡದಲ್ಲಿ ಒಮ್ಮೆಲ್ಲೆ ಈ ಜ್ಞಾನ ಸಂಪಾದಿಸಲೂ ಸಾಧ್ಯವಿಲ್ಲ, ಅವನಿಗೆ  ಬಾಲ್ಯದಲ್ಲಿಯೇ ಉತ್ತಮವಾದ ಶಿಕ್ಞಣ ಮತ್ತು ಉತ್ತಮವಾದ ತಂದೆ–ತಾಯಿಗಳು, ಒಳ್ಳೆಯ ವಾತವಾರಣ ಸಿಕ್ಕಿದ್ದರಿಂದಲೇ ಅವನು ಲೋಕ ಜ್ಞಾನಿಯಾಗಿದ್ದು. ಲೋಕ ಪ್ರಸಿದ್ದಿಯಾಗಿದ್ದು.
ಪಟ್ಟಭದ್ರಗಳ ಪ್ರಕಾರ ಬಾಲ್ಯದಲ್ಲಿಯೇ ಮನೆಯಿಂದ ಹೋರ ತಬ್ಬಿದ್ದರೆ ಅವನಿಗೆ ಉತ್ತಮವಾದ ಶಿಕ್ಷಣ ಪಡೆಯಲು ಸಾಧ್ಯವಿತ್ತೇ, ಅವತ್ತಿನ ಒಂದು ಸಂಪ್ರಾದಾಯಕ ಆಚರಣೆಯ ಕಾಲಘಟ್ಟದಲ್ಲಿ ಇವನು ಅಸಂಪ್ರದಾಯಕವಾಗಿ ಹುಟ್ಟಿದವನೆಂದು ಎಲ್ಲ ಕಡೆಗಳಿಂದ ಅವನನ್ನು ಹೋರ ದಬ್ಬಿಸಿಕೊಳ್ಳುತ್ತಿದ್ದ, ಶೇಖರನ ವರದಿಂದ ಹುಟ್ಟಿದವನನ್ನು ಎಂದು ಹೇಳುವ ಪಟ್ಟಭದ್ರಿಗಳು ಇಂಥಹ ವರದಿಂದ ಹುಟ್ಟಿದ ಮಗನನ್ನು ಯಾರದರೂ ತಾಯಿಂದಿರು ಹೋರದಬ್ಬುತ್ತಿದ್ದರೆ, ಅವನಲ್ಲಿ ಶಿವನನ್ನು ಕಂಡು ಅವನ್ನು ಗೌರವದಿಂದ, ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರೆ ಹೊರತು ಬಾಲ್ಯದಲ್ಲಿಯೇ ಹೊರದಬ್ಬುತ್ತಿದ್ದರು ಎಂಬುವುದು ಎಷ್ಟು ಸುಳ್ಳೊ ಹಾಗೆ ಅವನ ಈ ಜನ್ಮವೃತ್ತಾತವೆಲ್ಲವು ಕಟ್ಟುಕಥೆಗಳೆ.

ಸಂಶೋದಕರಾದ ವಿ.ರ ಕೊಪ್ಪಳ ಅವರು, ಉತ್ತಂಗಿ ಚೆನ್ನಪ್ಪನವರ ‘‘ಸರ್ವಜ್ಞ ವಚನಗಳ ಕಿರಿಯಾವೃತ್ತಿ’’ (1947)ಗೆ ಪ್ರಸ್ತಾವನೆ ಬರೆಯುತ್ತ ‘‘ಕುಂಬಾರ ಪಂಗಡಕ್ಕೆ ಮುಖಂಡನೆನಿಸಿ ಪಂಡಿತನೆನಿಸಿದ ಮಾಸೂರು ಬಸವರಸನು ದಕ್ಷಿಣದ ಕಾಶಿ ಎನಿಸಿದ ಹಂಪೆಯ ಈಶನಿಂದ ಮಕ್ಕಳ ವರ ಪ್ರಸಾದವನ್ನು ಪಡೆದುಕೊಂಡು ಅದನ್ನು ತವರೂರಿನಲ್ಲಿದ್ದ ಮಲ್ಲಮ್ಮನಿಗೆ ನೀಡಿದನು, ಅದರ ಫಲವಾಗಿ ಸರ್ವಜ್ಞನು ಜನಿಸಿದನು’’ ಎಂದು ಅಂದೆ ಅವರೆ ಅಭಿಪ್ರಾಯ ಪಟ್ಟಿದ್ದಾರೆ. ಮತ್ತೊಬ್ಬ ಸಂಶೋದಕರಾದ ಮತ್ತು ಸರ್ವಜ್ಞನ ಜೀವನ ದೇಶಾದಿಗಳ ಬಗೆಗೆ ವಿಶೇಷವಾದ ಅಭ್ಯಾಸವನ್ನು ಮಾಡಿರುವ ಶ್ರೀ ಜಿ.ಎಂ. ಉಮಾಪತಿ ಶಾಸ್ತ್ರಿಗಳು, ಮೈಸೂರು ಪ್ರಾಚ್ಯವಿದ್ಯಾ ಸಂಶೋಧನಾಲಯದ ಸರ್ವಜ್ಞನ ಕೈಬರಹವಾದ ಹೊತ್ತಿಗೆಯೊಂದರಲ್ಲಿರುವ ತ್ರಿಪದಿಯಾದ
                             "ತಂದೆ ಕುಂಬಾರ ಮಲ್ಲ, ತಾಯಿ ಮಳಲಾದೇವಿ
                             ಇಂದು ಶೇಖರನ ವರಪುತ್ರ ಧರಣಿಗೆ ಬಂದು
                           ಜನಿಸಿದ ಸರ್ವಜ್ಞ’’ ಎಂಬ ತ್ರಿಪದಿಯ ಆಧಾರದ ಮೇಲೆ ಹಾಗೂ ಇವನ ಬಹುತೇಕ ತ್ರಿಪದಿಗಳಲ್ಲಿ ಬಂದು ಸುಳಿಯುವ ಕುಂಬಾರ  ಪದಗಳಿಂದ, ಕುಂಬಾರನ ಚಿತ್ರಣಗಳು ಹೇಚ್ಚಹೇಚ್ಚಾಗಿ ಬರುವುದರಿಂದ ಮತ್ತು ಈ ವಚನ ಅವನದೇ ಯಾಗಿರುವುದರಿಂದ ಈ ತ ಕುಂಬಾರ ದಂಪತಿಗಳ  ಮಗನಾಗಿ ಹುಟ್ಟಿದವನೆಂದು ಕುಂಬಾರ ಮಲ್ಲಯ್ಯ ಮತ್ತು ಮಳಲಾದೇವಿಯರು ತಂದೆ–ತಾಯಿಗಳೆಂದು ಅಭಿಪ್ರಾಯ ಪಡುತ್ತಾರೆ. ಹಾಗೆಯೇ ಮುಂದುವರೆದು ಅವರು ಪುರಾತನ ಶಿವಶರಣ ಕುಂಬಾರ ಗುಂಡಯ್ಯನ ಕುಲದವನಾಗಿದ್ದಿರಬಹುದೆಂದು ಊಹಿಸಲು ಬರುವಂತಿದೆ ಎಂದೂ ‘ಸರ್ವಜ್ಞನು ಕುಂಬಾರ ದಂಪತಿಗಳಿಗೆ ಹುಟ್ಟಿದವನಾದರೂ ದೇವಸಾಲೆಯ ಮನೆತನದಲ್ಲಿ ಬೆಳೆದಿರುವುದು ಸಂಭಾವ್ಯವೆನಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಇಂಬುಕೊಡುವಂತೆ ಇವನ ತ್ರಿಪದಿಗಳಲ್ಲಿ  ಇಷ್ಟಲಿಂಗ, ಷಟ್‌ಸ್ಥಲ, ಅಷ್ಟಾವರಣಾದಿಗಳನ್ನು ವಿವೇಚಿಸಿದ್ದಾನೆ, ಬಸವಾದಿ ಶರಣರ ವಿಚಾರಧಾರೆಯಿಂದ ಪ್ರಭಾವಿತನಾಗಿದ್ದಾನೆ.
ಜನಪದರ ಕಾವ್ಯಾಭಿವ್ಯಕ್ತಿ ಪ್ರಕಾರವೇ ತ್ರಿಪದಿ, ತನ್ನ ಜ್ಞಾನವನ್ನು, ಲೋಕಾನುಭವಗಳನ್ನು ವ್ಯಕ್ತಪಡಿಸಲು ತ್ರಿಪದಿಯನ್ನೇ ಬಳಸಿದ ಸರ್ವಜ್ಞ,  ತ್ರಿಪದಿಗಳು ಕನ್ನಡ ಜನಮಾನಸದಲ್ಲಿ ನೆಲೆಯೂರಿದಷ್ಟು ಮತ್ತಾವ ಕವಿಯ ರಚನೆಗಳೂ ನೆಲೆಯೂರಿಲ್ಲ. ಒಳ್ಳೆಯದನ್ನು ಮೆಚ್ಚುವ, ಒಳಿತಲ್ಲದ್ದನ್ನು ನಿರ್ಭಿತಿಯಿಂದ ವಿಮರ್ಶಿಸುವ ಸಹಜವ್ಯಕ್ತಿತ್ವ ಹೊಂದಿದ್ದ ಸರ್ವಜ್ಞ ಕನ್ನಡದ ನಿಜವಾದ ಸಂತ. ಈ ಸಂತನ ಮೇಲೇರುವ  ಜನ್ಮವೃತ್ತಾಂತದ ಬಗ್ಗೆ ಇರುವ ಕಟ್ಟುಕಥೆಯನ್ನು ಮತ್ತು ಅದರ ಅಪಪ್ರಾಚಾರವನ್ನು ಮೊದಲು ಖಂಡಿಸಬೇಕು, ಇದರ ಪ್ರಚಾರವನ್ನು ನಿಲ್ಲಿಸುವಂತೆ ಒತ್ತಾಹಿಸಬೇಕು, ಇಂದು ಅವನ ಜಯಂತಿಯಾಗಿರುವುದ ರಿಂದ ನಾವು ಇದರ ವಿರುದ್ಧ ವೇದಿಕೆಯಲ್ಲಿ ದ್ವನಿ ಎತ್ತೋಣ.
ಇತ್ತೀಚೆಗೆ ಕರ್ನಾಟಕ ಸರ್ಕಾರ ಸರ್ವಜ್ಞನನ್ನು ಕುಂಬಾರ ಜನಾಂಗದವನೆಂದು ಪರಿಗಣಿಸಿ ಅವನ ಜಯಂತಿಯನ್ನು ಆಚಾರಿಸಲು ಕುಂಬಾರರನ್ನು ಮತ್ತು ಕುಂಬಾರ ಸಂಘಟನೆಗಳಿಗೆ ಆಹ್ವಾನಿಸುತ್ತಿದೆಯಾದರೂ ಅ ಕಟ್ಟು ಕಥೆಯನ್ನು ಹಾಗೆ ಉಳಿಸಿಕೊಂಡಿದೆ. ಸರ್ವಜ್ಞನ ವ್ಯಕ್ತಿತ್ವದ ಬಗ್ಗೆ ಹೇಳುವಾಗ ಈ ಕಥೆಯನ್ನು ಪ್ರಸರಿಸಲಾಗುತ್ತಿದೆ. ಇದನ್ನು ಕುಂಬಾರ ಜನಾಂಗದವರು ಒಂದಾಗಿ ಇದರ ವಿರುದ್ಧ ಧ್ವನಿ ಎತ್ತಿ ಈ ಕಥೆಗೆ ಅಂತ್ಯಯಾಡಬೇಕಾಗಿದೆ ಎಲ್ಲರೂ ತಮ್ಮ–ತಮ್ಮ ಪ್ರತಿಷ್ಟೆ, ಪ್ರಾದೇಶಿಕ ಅಸಮಾನತೆಯನ್ನು ಬದಿಗೊತ್ತಿ ಎಲ್ಲರೂ ಒಂದಾಗಿ ಖಂಡಿಸೋಣ. ಮತ್ತೋಮ್ಮೆ ಎಲ್ಲ ನನ್ನ ಬಂಧುಗಳಿಗೆ ಕುಂಬಾರ ಸರ್ವಜ್ಞ ಜಯಂತಿಯ ಶುಭಾಷಯಗಳು.

ಕುಬೇರ ಕುಂಬಾರ
ನಿಮ್ಮ ಸಲಹೆ– ಸೂಚನೆಗಳನ್ನು  kuberkp@gmail.com ಗೆ ಕಳಿಸಿಕೊಡಬೇಕೆಂದು ವಿನಂತಿ

ಗ್ರಂಥ ಋಣಿ 
1. ಸರ್ವಜ್ಞನ ಸಾಹಿತ್ಯ ಕುರಿತು ಅಧ್ಯಯನಗಳು..... ಸಂಪಾದಕ....ಡಾ. ವೀರೇಶ ಬಡಿಗೇರ.....ಕನ್ನಡ ವಿಶ್ವವಿದ್ಯಾಲಯ
2. ಸರ್ವಜ್ಞ: ತೌಲನಿಕ ಅಧ್ಯಯನಗಳು....ಸಂಪಾದಕ....ಡಾ. ಪಿ. ಮಹಾದೇವಯ್ಯ.....ಕನ್ನಡ ವಿಶ್ವವಿದ್ಯಾಲಯ
3. ಸರ್ವಜ್ಞನ ವಚನಗಳು........ಸಂಪಾದಕ...ಡಾ. ಎಲ್‌. ಬಸವರಾಜು
4. ಪರಮಾರ್ಥ (ಸರ್ವಜ್ಞನ ವಚನಗಳು).....ಸಂಪಾದಕ...ಡಾ. ಎಲ್‌. ಬಸವರಾಜು
5. ಸರ್ವಜ್ಞಮೂರ್ತಿಯ ವಚನಗಳು.......ಸಂಪಾದಕ....ಜಿ.ಎಂ, ಉಮಾಪತಿ ಶಾಸ್ತ್ರಿ