ರತ್ನಪ್ಪಣ್ಣ ಕುಂಬಾರ ರವರ ಜೀವನ ಚರಿತ್ರೆಯ ಪುಸ್ತಕ

ಗದಗಿನ ಡಂಬಳದ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠವು ಡಾ. ಎಂ.ಎಂ. ಕುಲಬುರ್ಗಿ ಅಧ್ಯಯನಸಂಸ್ಥೆಯ ಅಡಿಯಲ್ಲಿ 19,20 ಮತ್ತು 21ನೇ ಶತಮಾನದಲ್ಲಿ ಬಾಳಿದ ನೂರಾರು ಜನ ಲಿಂಗಾಯತ ಪುಣ್ಯಪುರುಷರನ್ನು ಸ್ಮರಿಸುತ್ತ, ಉಪನ್ಯಾಸಗಳನ್ನು ಏರ್ಪಡಿಸುತ್ತ ಮತ್ತು ಅ ಉಪನ್ಯಾಸ ಮಾಲೆಯು ಜನಮುಖಿಯಾಗಬೇಕು ಎಂಬ ದೃಷ್ಟಿಯಿಂದ ವಿವಿಧ ಮಾಲಿಕೆಗಳಡಿಯಲ್ಲಿ ಪುಸ್ತಕಗಳನ್ನು ಪ್ರಕಟಿಸಿ ನಾಡಿನ ಜನರಿಗೆ ಉಣಪಡಿಸುತ್ತಿದೆ. ಇತಂಹ ಮಾಲಿಕೆಯಲ್ಲಿ ‘ಲಿಂಗಾಯತ ಪುಣ್ಯಪುರುಷ ಸಾಹಿತ್ಯ ರತ್ನಮಾಲೆ’ ಯೂ ಸಹ ಒಂದು.
ಪ್ರತಿ ತಿಂಗಳು ಸಮಾಜವನ್ನುದ್ಧರಿಸಿದ ಒಬ್ಬ ಲಿಂಗಾಯತ ಪುಣ್ಯಪುರುಷರ ಚರಿತ್ರೆಯನ್ನು ಕುರಿತು ಉಪನ್ಯಾಸ ಏರ್ಪಡಿಸುವುದು. ಏರ್ಪಡಿಸಿದ ಉಪನ್ಯಾಸವನ್ನು ಪ್ರಕಟಿಸಿ ಸುಲಭ ಬೆಲೆಯಲ್ಲಿ ವಿತರಣೆಗೊಳಿಸುವುದು, ಈ ಮಾಲಿಕೆಯ ಸಂಕಲ್ಪ. ಅದರಂತೆ ತಿಂಗಳು ತಿಂಗಳು ಪ್ರಕಟವಾಗುವ ಮಾಲಿಕೆಯಲ್ಲಿ 312ನೇ ಕೃತಿಯಾಗಿ ನಮ್ಮ ಕುಂಬಾರ ಜನಾಂಗದ ಹೆಮ್ಮೆಯ ಹಾಗೂ ದೇಶಭಕ್ತರಾದ ರತ್ನಪ್ಪ ಕುಂಬಾರ ಅವರನ್ನು ಕುರಿತು ಪ್ರಕಟವಾಗಿದೆ. ಡಾ.ಎಂ.ಬಿ. ಹೂಗಾರ ಎಂಬುವವರು ಈ ಪುಸ್ತಕವನ್ನು ರಚಿಸಿದ್ದಾರೆ. ಹುಬ್ಬಳಿಯ ಮಠದ ಭಕ್ತರಾದ ಶ್ರೀ ಉಮಾದೇವಿ ಗುರುಸಿದ್ಧಪ್ಪ ಬುಳ್ಳಾನವರು ಪ್ರಕಟಣೆಗೆ ಸಹಕಾರಿಸಿದ್ದಾರೆ.
ದೇಶಭಕ್ತ ಮತ್ತು ಸಂವಿಧಾನ ರಚನೆಯಲ್ಲಿ ಪಾಲ್ಗೊಂಡ ರತ್ನಪ್ಪಣ್ಣ ಕುಂಬಾರ ಅವರ ಜೀವನ, ಶಿಕ್ಷಣ, ಸ್ವಾತಂತ್ರ್ಯ ಚಳುವಳಿಯ ಹೋರಾಟ, ರಾಜಕೀಯ, ಸಹಕಾರ ಚಳುವಳಿ, ಸೇವಾಮನೋಭಾವ ಮತ್ತು ಇತ್ಯಾಧಿ ವಿಷಯಗಳನ್ನು ‘‘ಹೋರಟದ ಹೆಜ್ಜೆ, ಸಹಕಾರ ಚಳುವಳಿ, ಒಕ್ಕಲುತನದ ವಿಕಾಸ, ಕಾರ್ಮಿಕರ ಕಲ್ಯಾಣ–ಶಿಕ್ಷಣ, ರಾಜಕೀಯ ಸೇವೆ, ಪ್ರಗತಿಪರ ಚಿಂತನ ಮತ್ತು ಹಿರಿಯರು ಕಂಡ ಅಣ’’್ಣಾ ಎಂದು, ಒಟ್ಟು ಏಳು ಅಧ್ಯಾಯನದ ಮೂಲಕ ಲೇಖಕರು ಸಮಗ್ರವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಂದು ಅಧ್ಯಾಯವು ಅವರ ವ್ಯಕ್ತಿತ್ವ, ಅದರ್ಶಮೌಲ್ಯಗಳು ಹಾಗೂ ಅವರ ಸಮಾಜೀಕ ಜೀವನದ ದಿಟ್ಟತನದ ನಿಲುವುಗಳನ್ನು ಮತ್ತು ಹೋರಾಟಗಳನ್ನು ಓದುತ್ತಾ ಹೋದರೆ ರೋಮಾಂಚನವಾಗುತ್ತದೆ.
ರತ್ನಪ್ಪಣ್ಣ ಕುಂಬಾರ ಅವರು ದಕ್ಷಿಣ ಭಾರತದ ಹಲವು ಸಂಸ್ಥಾನಗಳ ವಿಲಿನೀಕರಣಕ್ಕೆ ಪ್ರಯತ್ನಿಸಿ ದಕ್ಷಿಣ ಭಾರತದ ವಲ್ಲಭಭಾಯಿ ಪಟೇಲರೆಂದು ಖ್ಯಾತಿಗೆ ಭಾಜನರಾಗಿದ್ದರು. ಲಿಂಗಾಯತ ಬೋರ್ಡಿಂಗ್ ಸಂಸ್ಥೆಯ ಅಧೀಕ್ಷಕ ಹುದ್ದೆಗೆ ರಾಜೀನಾಮೆ ಕೊಟ್ಟು ಸ್ವತಂತ್ರ ಚಳುವಳಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಫೌಜಪುರ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸುವ ಮೂಲಕ ರಾಜಕೀಯ ಜೀವನಕ್ಕೆ ಚಾಲನೆ ನೀಡಿದರು. ಅಗಸ್ಟ್ 9, 1942ರ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿಜೀಯವರ ಕರೆಯ ಮೇರೆಗೆ ಸಕ್ರಿಯವಾಗಿ ಭಾಗವಹಿಸಿ ಚಲೇಚಾವ್ ಚಳುವಳಿಯನ್ನು ಮಹಾರಾಷ್ಟ್ರದಲ್ಲಿ ಯಶಸ್ವಿಗೊಳಿಸಿ ಬ್ರೀಟಿಷರ ಕೆಂಗಣ್ಣಿಗೆ ಗುರಿಯಾಗಿ ಜೈಲುವಾಸವನ್ನು ಅನುಭವಿಸಿದರು.
’ನಹಿ ಸಂಸ್ಕಾರ ನಹಿ ಸಹಕಾರ’ ಎಂದು ಮಹಾರಾಷ್ಟ್ರದ ಗಡಿಭಾಗದಲ್ಲಿ ಲೋಕ ಕಲ್ಯಾಣಕಾರಕ ಕಾರ್ಯ ಮಾಡಿ ಜನಸಾಮಾನ್ಯರಿಂದ ದೇಶಭಕ್ತ ಎಂಬ ಗೌರವಕ್ಕೆ ಪಾತ್ರರಾದರು. ಸಹಕಾರ ತತ್ವದ ಬುನಾದಿಯ ಮೇಲೆ ಸಮಾಜವಾದವನ್ನು ಪ್ರತಿಷ್ಠಾಪಿಸಿದ ಶ್ರೇಯಸ್ಸು ಅವರದು. ಸಕ್ಕರೆ ಕಾರಖಾನೆ, ನೂಲಿನ ಗಿರಣಿ, ಶಿಕ್ಷಣ ಸಂಸ್ಥೆಗಳು, ಬ್ಯಾಂಕ್ ಮೊದಲಾದ ಸಂಸ್ಥೆಗಳ ಸಂಸ್ಥಾಪಕರಾಗಿ ಅವರು ಮಾಡಿದ ಕಾರ್ಯ ಅವಿಸ್ಮರಣೀಯವಾಗಿದೆ. ಸ್ವಾತಂತ್ರ್ಯಾನಂತರವೂ ಶಾಸಕರಾಗಿ, ಸಂಸದರಾಗಿ, ಮಂತ್ರಿಗಳಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಜೊತೆಗೆ ಮಹಾರಾಷ್ಟ್ರ ಸರ್ಕಾರ ಮತ್ತು ಅನೇಕ ಸಂಘಸಂಸ್ಥೆಗಳು ಪ್ರಶಸ್ತಿ ಮತ್ತು ಗೌರಗಳನ್ನು ನೀಡಿದ್ದಾರೆ.
ನನಗೆ ತಿಳಿದ ಮಟ್ಟಿಗೆ ಕನ್ನಡದಲ್ಲಿ ರತ್ನಪ್ಪಣ್ಣ ಕುಂಬಾರರ ಬಗ್ಗೆ ಸಮಗ್ರವಾಗಿ ಅವರ ಜೀವನ ಚರಿತ್ರೆಯನ್ನು ಕಟ್ಟಿಕೊಡುವ ಯಾವ ಪುಸ್ತಕವು ಪ್ರಕಟವಾಗಿಲ್ಲ. ಆದರೆ ಕುಂಬಾರರ ಕೆಲ ಪತ್ರಿಕೆಗಳಲ್ಲಿ ಮತ್ತು ಇತರೆ ಪತ್ರಿಕೆಗಳಲ್ಲಿ ಕೆಲವೊಂದು ಲೇಖನಗಳು ಪ್ರಕಟವಾಗಿವೆ. ರತ್ನಪ್ಪಣ್ಣರವರ ಸಂಪೂರ್ಣ ಜೀವನ ಚರಿತ್ರೆಯನ್ನು ಕಟ್ಟಿಕೊಡಲು ಲೇಖಕರು ಇಲ್ಲಿ ಶ್ರಮಿಸಿದ್ದಾರೆ. ನಮ್ಮ ಈ ಮಹಾನ್ ವ್ಯಕ್ತಿಯ ಜೀವನ ಚರಿತ್ರೆಯನ್ನು ನಮ್ಮ ನಾಡಿನ ಎಲ್ಲಾ ಕುಂಬಾರರು ತಿಳಿದುಕೊಳ್ಳಲೇಬೇಕು. ಇವರ ಜೀವನ ಚರಿತ್ರೆಯ ಪುಸ್ತಕ ನಮ್ಮ ಮನೆಗಳಿಗೆ ಕಳಶ ಇದ್ದಂತೆ, ನಮ್ಮ ಯುವ ಜನಾಂಗಕ್ಕೆ ಸ್ಪೂರ್ತಿ, ಚೈತನ್ಯವನ್ನು ನೀಡುವ ಭಗವದ್ಗೀತೆ. ಗದಿಗಿನ ಡಾ. ಎಂ.ಎಂ. ಕಲಬುರ್ಗಿ ಅಧ್ಯಯನಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದೆ. ಅಲ್ಲಿ ಪುಸ್ತಕಗಳ ಸಿಗುತ್ತವೆ. ಪುಸ್ತಕದ ಬೆಲೆ ಕೇವಲ 60ರೂಪಾಯಿ. ನಾಡಿನ ಪ್ರಸಿದ್ಧ ಪುಸ್ತಕ ಅಂಗಡಿಗಳಲ್ಲಿಯೂ ಸಹ ದೊರೆಯುತ್ತದೆ. ಬೆಂಗಳೂರಿನಲ್ಲಿರುವ ಕುಂಬಾರರು ಪುಸ್ತಕಕ್ಕೆ ನನ್ನನ್ನು ಸಂಪರ್ಕಿಸಬಹುದು.(7892358935)
ಕುಬೇರ ಕುಂಬಾರ