ಸರ್ವಜ್ಞ: ಮರುದರ್ಶನ ಭಾಗ –2
ಕಲ್ಯಾಣ ಕ್ರಾಂತಿಯ ಭಾಗವಾದ ಜಾತಿ, ವರ್ಣವ್ಯವಸ್ಥೆ ಮತ್ತು ಮೌಡ್ಯ ಆಚಾರಣೆಗಳ ವಿರುದ್ದದ ಹೋರಾಟವನ್ನು ವಚನಕಾರರ ನಂತರ ಮುಂದುವರಿಸಿದವನೆಂದರೆ ಅದು ಸರ್ವಜ್ಞ. ಬಸವಣ್ಣನಿಂದ ಒಂದು ಹೊಸ ಸಾಮಾಜಿಕ ವಿರ್ಮರ್ಶೆವೆಂಬ ವಿಶಿಷ್ಟ ಪರಂಪರೆ ಹುಟ್ಟಿಕೊಂಡಿತು. ಇದನ್ನು ಅನೇಕ ಶತಮಾನಗಳ ನಂತರ ಸರ್ವಜ್ಞ ಬಹಳ ತೀರ್ವವಾಗಿ
ಇದನ್ನು ಆಚಾರಣೆಗೆ ತಂದನು. ಅಂದು ಸರ್ವಜ್ಞ ಸಮಾಜಿಕ ಭಕ್ತಿ, ಧರ್ಮ, ಆಚಾರಣೆ, ಮೂಡನಂಬಿಕೆಗಳು, ಸಾಮಾಜ ಘಾತಕಗಳ ವಿರುದ್ಧ ಸೆಣಸಲು ತ್ರಿಪದಿ ಮಾರ್ಗವನ್ನು ಕಂಡುಕೊಂಡನು. ಈ ತ್ರಿಪದಿಗಳ ಮೂಲಕ ತನ್ನ ಅಭಿವ್ಯಕ್ತಿ ಸ್ವತಂತ್ರವನ್ನು ಯಾರ ಮೂಲಾಜಿಲ್ಲದೆ ಹೊರಹಾಕುತಿದ್ದ. ಅಂದಿನ ಸಾಮಾಜಿಕ ಸಮಸ್ಯೆಗಳನ್ನು ತ್ರಿಪದಿಗಳ ಮೂಲಕ ಕಟ್ಟಿಕೊಡುತ್ತಿದ್ದ. ಸಮಾಜದ ಡಾಂಭಿಕತೆಯನ್ನು, ಭಕ್ತಿಯ ಹೆಸರಿನಲ್ಲಿ ಪುರೋಹಿತಶಾಯಿಗಳು ನೆಡೆಸುತಿದ್ದ ಅನಾಚರಗಳನ್ನು ತನ್ನ ತ್ರಿಪದಿಗಳ ಮೂಲಕ ವಿಡಂಬಿಸಿ ಅವುಗಳ ಮುಖವಾಡಗಳನ್ನು ಕಳಚುತಿದ್ದ. ಅಂದಿನ ತಟಸ್ಥ ಸಮಾಜವನ್ನು ಎಚ್ಚರಿಸುತ್ತ–ತಿಳಿಹೇಳುತ್ತ ಲೋಕವನ್ನು ಸುತ್ತಿದ. ಹೀಗೆ 12ನೇ ಶತಮಾನದಲ್ಲಿ ಶರಣರು ಪ್ರತಿಪಾದಿಸಿದ ಸಮಾನತೆಯ ಶರಣ ಸಮಾಜವನ್ನು 16–17ನೇ ಶತಮಾನದಲ್ಲಿ ಸರ್ವಜ್ಞ ತನ್ನ ತ್ರಿಪದಿ ಮೂಲಕ ಭದ್ರಪಡಿಸಲು ಪ್ರಯತ್ನಿಸಿದ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸರ್ವಜ್ಞನ ಸ್ಥಾನ ವಿಶಿಷ್ಟವಾದುದು. ಜನಸಮಾನ್ಯರಲ್ಲಿ ಒಂದಾಗಿ ಕಾವ್ಯವನ್ನು ರಚಿಸಿದ್ದರಿಂದಲೇ ನಮ್ಮ ನಡುವೆ, ನಮ್ಮ ಬದುಕಿನ ಭಾಗವಾಗಿ ಹಾಗಾಗ ಕಾಣಿಸಿಕೊಳ್ಳುತ್ತಲ್ಲೇ ಇರುತ್ತಾನೆ. ಇವನ ಕಾವ್ಯದಲ್ಲಿ ಏನಿದೆ ಎಂದು ಕೇಳುವುದಕ್ಕಿಂತ ಏನಿಲ್ಲ ಎಂಬುದನ್ನು ಕೇಳಬೇಕು. ಲೌಕಿಕ, ಆಧ್ಯಾತ್ಮ ವಿಷಯಗಳನ್ನು ಚರ್ಚಿಸಿದ್ದಾನೆ, ವಿಜ್ಞಾನ–ವೈಜ್ಞಾನಿಕ–ವೈದ್ಯಕೀಯ ವಿಷಯಗಳನ್ನು ತಿಳಿಸಿದ್ದಾನೆ. ಸಾಮಾಜಿಕ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾನೆ. ಲೋಕಜ್ಞಾನಗಳನ್ನು, ಕಾಲಜ್ಞಾನಗಳನ್ನೂ ಹೇಳಿದ್ದಾನೆ. ಇತಂಹ ಗಹನವಾದ ವಿಷಯಗಳನ್ನು ಸರಳ ಮತ್ತು ಸುಲಭವಾಗಿ ವರ್ಣಿಸಿರುವುದು ಅವನ ವಿಶೇಷ.
ಸರ್ವಜ್ಞ ತನ್ನ ತ್ರಿಪದಿ ಎಂಬ ಮೂರು ಸಾಲುಗಳ ಮೂಲಕ ಬದುಕಿನ ಒಳಿತ ಕೆಡುಕುಗಳ ಬಗ್ಗೆ ಮನಮುಟ್ಟುವಂತೆ ಹೇಳಿರುವುದನ್ನು ಮುನ್ನೂರು ಸಾಲುಗಳಲ್ಲಿ ಹೇಳಬಹುದಾದ–ಬರೆಯಬಹುದಾದ ಅರ್ಥವನ್ನು ತುಂಬಿದ್ದಾನೆ. ತಾನು ನಂಬಿದ ಮೌಲ್ಯ ಹಾಗೂ ಸತ್ಯಗಳನ್ನು ಜಗದ ಮುಂದೆ ಇಡಲು ಎಂದೂ ಹಿಂದೆ–ಮುಂದೆ ನೋಡಲಿಲ್ಲ. ಸತ್ಯದ ಸಾಕ್ಷಾತ್ಕಾರಕ್ಕಾಗಿ ಸಮಾಜದ ಎಲ್ಲಾ ಮೌಢ್ಯಗಳನ್ನು, ಧರ್ಮದ ಪ್ರಖಂಡ ರೂಪಗಳನ್ನು ಹಾಗು ಜಡ್ಡುಗಟ್ಟಿದ ಮೌಲ್ಯಗಳನ್ನು ಪ್ರಶ್ನಿಸುತ್ತಿದ್ದ. ಇವನ ಚಿಂತನೆಗಳ ಹರಹು ಕೂಡಾ ತುಂಬಾ ವಿಸ್ತಾರವಾದುದು, ಅಂತರಂಗದ ಅಭಿವ್ಯಕ್ತಿಯಿಂದ ಹಿಡಿದು, ಸಾಮಾಜಿಕ ವಲಯದ ಎಲ್ಲಾ ಮಗ್ಗಲುಗಳನ್ನು ಆತ ಲಕ್ಷಿಸಿದ್ದಾನೆ. ಸಾಮಾಜಿಕ, ಆರ್ಥಿಕ ಧಾರ್ಮಿಕ ಸಮಸ್ಯೆಗಳನ್ನು ಕುರಿತು ಚಿಂತಿಸಿರುವ ಪರಿ ವಿಶಿಷ್ಟವಾದುದು.

ಸರ್ವಜ್ಞ ಎಂಬ ಈ ಮಹಾನ್ ವ್ಯಕ್ತಿಯನ್ನು ನಾವು ವರ್ತಮಾನದಲ್ಲಿ ಪ್ರತಿ ನಿರ್ಧಿಕರಿಸಿಕೊಳ್ಳಬೇಕಾಗಿದೆ. ಕಳಂಕ ಮುಕ್ತ ಸರ್ವಜ್ಞ ಮಾಡಬೇಕಾದ ಅನಿವಾರ್ಯತೆ ಇಂದು ನಮಗೆ ಇದೆ. ಸರ್ವಜ್ಞನನ್ನು ಒಂದು ಜಾತಿಯ ಚೌಕಟ್ಟಿನ ಒಳಗೆ ತಂದು ನಿಲ್ಲಿಸುವುದು ಅಷ್ಟು ಸಮಂಜಸವಲ್ಲದಿದ್ದರು, ಕುಂಬಾರ ಸಮುದಾಯದ ಐಕಾನ್ ಆಗಿ ಇಟ್ಟುಕೊಂಡು ಸುಮುದಾಯದ ಒಕ್ಕಟ್ಟು ಅಥಾವ ಒಗ್ಗೂಡುವಿಕೆ ಮತ್ತು ಅಭಿವೃದ್ದಿಯ ಜೊತೆಗೆ ಅವನಿಗೆ ಅಂಟಿರುವ ಕಳಂಕವನ್ನು ತೊಳೆಯಬೇಕಾಗಿದೆ. ಕಪೊಕಲ್ಪಿತ ಇತಿಹಾಸವನ್ನು ಒಪ್ಪಿಕೊಂಡು ಹಾರ–ತುರಾಹಿ ಮತ್ತು ಆಸನಗಳಿಗಾಗಿ ತಮ್ಮ ತನವನ್ನು ಒಪ್ಪಿಸಿಕೊಳ್ಳದೆ ಇದರ ವಿರುದ್ಧ ಪ್ರತಿಭಟಿಸುವ ಮನೋಭಾವವನ್ನು ಕುಂಬಾರ ಸಮುದಾಯದ ಜನಗಳು ಬೆಳಸಿಕೊಳ್ಳಬೇಕು.
ಸರ್ವಜ್ಞನ ಹುಟ್ಟಿನ ಕಥೆ ಕಲ್ಪಿತ ಕಥೆಯಾಗಿದ್ದು, ಕಟ್ಟುಕಥೆಯಾಗಿದ್ದು, ಅವನ ಜ್ಞಾನ ಸಹಿಸಲಾರದವರು ಕುಚೋಧ್ಯತನದಿಂದ ಮತ್ತು ಅವನ ನೇರ ನಿಷ್ಠುರ ಮಾತುಗಳಿಂದ ಈ ಕಟ್ಟು ಕಥೆಗೆ ಕಾರಣವಾಗಿದೆ. ನಿಂಗಪ್ಪ ಚಳಗೇರಿಯವರು ವಿಚಾರದಂತೆ ಬ್ರಾಹ್ಮಣರಲ್ಲಿ ಬಸವನೆಂಬ ನಾಮ ವಾಚಕ ಇರುವುದಿಲ್ಲ ಎಂದು ಹೇಳಿದ್ದಾರೆ. ಬಸವರಸ ಒಂದೇ ರಾತ್ರಿಯಲ್ಲಿ ಮಾಳಿಯೊಂದಿಗೆ ಕೂಡುವ ಪ್ರಸಂಗವೇಕೆ ಬಂತು ಎಂಬ ಪ್ರಶ್ನೆಯನ್ನು ನಮ್ಮಲ್ಲಿ ಹುಟ್ಟಿಹಾಕಿಕೊಳ್ಳಬೇಕಾಗಿದೆ. ಮಾಳಿ ತಂದೆ ಸ್ವಂತಃ ಮಗಳು ಬಾಲವಿಧುವೆಯನ್ನು ಬಸವರಸನಿಗೆ ಒಪ್ಪಿಸಿದ ಕಥೆ ಸರ್ವಜ್ಞನ ಅಕ್ಕನ ಕಥೆ, ಸರ್ವಜ್ಞ ಪರಮಾರ್ಥಗಳ ಅರ್ಧದ್ವಂದ್ವ, ವೆಂಕನ ಓಲೆ ಇವೆಲ್ಲಾ ಕಪೋಲಕಲ್ಪಿತ, ಉಚ್ಚವರ್ಣಿಯರ ಕೈವಾಡವೆಂದು ದೇಶಪಾಂಡೆ ಮನೋಹರರಾಯರು ಅಭಿಪ್ರಾಯಪಡುತ್ತಾರೆ. ಸಾಮಾನ್ಯವಾಗಿ ತೀರ್ಥಯಾತ್ರೆ, ದೇವ ದರ್ಶನಕ್ಕೆ ಹೋದರೆ ಹೆಂಡರು ಮಕ್ಕಳನ್ನು ಕರೆದೊಯ್ಯುವ ರೂಡಿ ಆದರೆ ಬಸವರಸ ಒಬ್ಬನೇ ಹೋದ, ಪ್ರಸಾದ ಕುಂಬಾರ ಮಾಳಿಗೆ ಕೊಟ್ಟ ಎಂಬುವುದು ಚಿಂತನೆಗೆ ಎಡೆಮಾಡುತ್ತದೆ.
ಸರ್ವಜ್ಞನನ ವಚನಗಳಲ್ಲಿ ಗುರುವಿನ ಬಗ್ಗೆ ಸಾಕಷ್ಟು ವಚನಗಳಿದ್ದು ಧರ್ಮ–ಕರ್ಮಗಳ ಸೂಕ್ಷ್ಮತೆಯನ್ನು, ಆಳ–ಅಗಲವನ್ನು, ಜೀವದ ವೈವಿಧ್ಯತೆಯನ್ನು,ಅನುಭವದ ಅಗಾಧ ಪಾಂಡಿತ್ಯವನ್ನು ವಚನಗಳಲ್ಲಿ ಕಾಣುತ್ತೇವೆಂದರೆ ಗುರುಗಳ ಮಾರ್ಗದರ್ಶನ ಇರಲೇಬೇಕು. ಇವನು ಸೋಮಶಂಕರ ಎಂಬ ಗುರುವಿನಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರಸ್ತಾಪ ನಂಜೇಗೌಡರ ಸಂಪಾದಕದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಾಡಲಾಗಿದೆ. ಸಂಶೋಧಕರಾದ ವಿ.ರ.ಕೊಪ್ಪಳ ಅವರು, ಉತ್ತಂಗಿ ಚೆನ್ನಪ್ಪನವರ ‘‘ಸರ್ವಜ್ಞ ವಚನಗಳ ಕಿರಿಯಾವೃತ್ತಿ’’ (1947)ಗೆ ಪ್ರಸ್ತಾವನೆ ಬರೆಯುತ್ತ ‘‘ಕುಂಬಾರ ಪಂಗಡಕ್ಕೆ ಮುಖಂಡನೆನಿಸಿ ಪಂಡಿತನೆನಿಸಿದ ಮಾಸೂರು ಬಸವರಸನು ದಕ್ಷಿಣದ ಕಾಶಿ ಎನಿಸಿದ ಹಂಪೆಯ ಈಶನಿಂದ ಮಕ್ಕಳ ವರ ಪ್ರಸಾದವನ್ನು ಪಡೆದುಕೊಂಡು ಅದನ್ನು ತವರೂರಿನಲ್ಲಿದ್ದ ಮಲ್ಲಮ್ಮನಿಗೆ ನೀಡಿದನು, ಅದರ ಫಲವಾಗಿ ಸರ್ವಜ್ಞನು ಜನಿಸಿದನು’’ ಎಂದು ಅಂದೆ ಅವರು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೊಬ್ಬ ಪ್ರಸಿದ್ದ ಸಂಶೋಧಕರಾದ ಮತ್ತು ಸರ್ವಜ್ಞನ ಜೀವನ ದೇಶಾದಿಗಳ ಬಗೆಗೆ ವಿಶೇಷವಾದ ಸಂಶೋಧನೆ ಮಾಡಿರುವ ಶ್ರೀ ಜಿ.ಎಂ. ಉಮಾಪತಿ ಶಾಸ್ತ್ರಿಗಳು, ಮೈಸೂರು ಪ್ರಾಚ್ಯವಿದ್ಯಾ ಸಂಶೋಧನಾಲಯದ ಸರ್ವಜ್ಞನ ಕೈಬರಹದ ಹೊತ್ತಿಗೆಯೊಂದರಲ್ಲಿರುವ,
"ತಂದೆ ಕುಂಬಾರ ಮಲ್ಲ, ತಾಯಿ ಮಳಲಾದೇವಿ
ಇಂದು ಶೇಖರನ ವರಪುತ್ರ ಧರಣಿಗೆ ಬಂದು
ಜನಿಸಿದ ಸರ್ವಜ್ಞ’’ ಎಂಬ ತ್ರಿಪದಿಯ ಆಧಾರದ ಮೇಲೆ ಹಾಗೂ ಇವನ ಬಹುತೇಕ ತ್ರಿಪದಿಗಳಲ್ಲಿ ಬಂದು ಸುಳಿಯುವ ಕುಂಬಾರ ಪದಗಳಿಂದ ಹಾಗು ಕುಂಬಾರನ ಚಿತ್ರಣಗಳು ಹೆಚ್ಚಚ್ಚಾಗಿ ಬರುವುದರಿಂದ ಮತ್ತು ಈ ವಚನ ಅವನದೇ ಅಗಿರುವುದರಿಂದ ಈತ ಕುಂಬಾರ ದಂಪತಿಗಳ ಮಗನಾಗಿ ಹುಟ್ಟಿದವನೆಂದು ಕುಂಬಾರ ಮಲ್ಲಯ್ಯ ಮತ್ತು ಮಳಲಾದೇವಿಯರು ತಂದೆ–ತಾಯಿಗಳೆಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗೆಯೇ ಮುಂದುವರೆದು ಅವರು ಪುರಾತನ ಶಿವಶರಣ ಕುಂಬಾರ ಗುಂಡಯ್ಯನ ಕುಲದವನಾಗಿದ್ದಿರಬಹುದೆಂದು ಊಹಿಸಲು ಬರುವಂತಿದೆ ಎಂದೂ ‘ಸರ್ವಜ್ಞನು ಕುಂಬಾರ ದಂಪತಿಗಳಿಗೆ ಹುಟ್ಟಿದವನೆಂದು ತಿಳಿಸಿದ್ದಾರೆ. ಹೀಗೆ ಅನೇಕ ವಿದ್ವಾಂಸರು, ಸಂಶೋಧಕರು ಈ ಕಟ್ಟುಕಥೆಯ ವಿರುದ್ಧ ಧ್ವನಿ ಎತ್ತಿದ್ದಾರೆ ಹಾಗು ಪ್ರತಿಭಟಿಸಿದ್ದಾರೆ.
ಕಪೋಕಲ್ಪಿತ ತ್ರಿಪದಿಗಳ ಮೂಲಕ ಸರ್ವಜ್ಞನನಿಗೆ ವ್ಯಕ್ತಿತ್ವದ ಗುಣಗಳನ್ನು ಕಟ್ಟಿಕೊಡಲಾಗಿದೆ. ಈ ವ್ಯಕ್ತಿಯ ಬಗೆಗೆ ವ್ಯಕ್ತವಾಗಿರುವ ಇತಂಹ ಅಮೂರ್ತ ಗುಣಗಳ ಆಧಾರದ ಮೇಲೆ ಮೂರ್ತರೂಪ ಕೊಡಲಾಗಿದೆ. ಇನ್ನೂ ಹೆಚ್ಚಿನ ಸಂಶೋಧನೆ ನಡೆಸಿ ಈ ಸರ್ವಜ್ಞನ ಈ ಕಲ್ಪಿತ ಕಟ್ಟುಕಥೆಯ ರೂಪವನ್ನು ಕಳಚಬೇಕಾಗಿದೆ.
ಕರ್ನಾಟಕ ಸರ್ಕಾರ ಕುಂಬಾರ ಜನಾಂಗದವರನ್ನು ಮತ್ತು ಕುಂಬಾರ ಸಂಘಟನೆಗಳಿಗೆ ಸರ್ವಜ್ಞ ಜಯಂತಿಗೆ ಆಹ್ವಾನಿಸುತ್ತಿದೆಯಾದರೂ, ಸರ್ವಜ್ಞನ ಚರಿತ್ರೆ ಬಗ್ಗೆ ಹೇಳುವಾಗ ಈ ಕಟ್ಟು ಕಥೆಯನ್ನು ಪ್ರಚಾರ ಪಡಿಸಲಾಗುತ್ತಿದೆ ಮತ್ತು ವಾಚಿಸಲಾಗುತ್ತಿದೆ. ಕುಂಬಾರ ಜನಾಂಗದವರು ಒಂದಾಗಿ ಇದರ ವಿರುದ್ಧ ಧ್ವನಿ ಎತ್ತಿ ಪ್ರತಿಭಟಿಸಬೇಕು, ಹಾಗು ಸರ್ವಜ್ಞನ ಜನ್ಮಸ್ಥಳ ಮತ್ತು ಕರ್ಮಸ್ಥಳಗಳಾದ ಹಾವೇರಿ ಜಿಲ್ಲೆಯ, ಹಿರೇಕೆರೂರು ತಾಲೂಕಿನ ಮಾಸುರು ಮತ್ತು ಅಬಲೂರು ಗ್ರಾಮಗಳಲ್ಲಿ ಸರ್ವಜ್ಞನ ಸಮಾಧಿ, ಆರಾಧಿಸಿದ ದೇವಸ್ಥಾನ ಹಾಗು ಇನ್ನಿತರ ಐತಿಹಾಸಿಕ ಹಿನ್ನೆಲೆವುಳ್ಳ ಸ್ಥಳಗಳು ಅನಾಥವಾಗಿ ಪಾಳು ಬಿದ್ದಿವೆ. ಈ ಸ್ಥಳಗಳನ್ನು ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮೂಲಕ ಅಭಿವೃದ್ಧಿ ಪಡಿಸಬೇಕು ಮತ್ತು ಸರ್ವಜ್ಞ ಅಧ್ಯಯನ ಪೀಠ, ಗ್ರಂಥಾಲಯ ಸ್ಥಾಪಿಸಿ ಸರ್ವಜ್ಞನ ವಚನ ಸಾಹಿತ್ಯ ಎಲ್ಲೆಡೆ ಪಸರಿಸುವಂತೆ ಮಾಡಬೇಕು ಎಂದು ವೇದಿಕೆ ಹಂಚಿಕೊಂಡವರು ಪ್ರಸ್ತಾಪಿಸಬೇಕು.
ಎಲ್ಲ ನನ್ನ ಬಂಧುಗಳಿಗೆ ಕುಂಬಾರ ಸರ್ವಜ್ಞ ಜಯಂತಿಯ ಶುಭಾಶಯಗಳು.
ಕುಬೇರ ಕುಂಬಾರ
ನಿಮ್ಮ ಸಲಹೆ– ಸೂಚನೆಗಳನ್ನು ಮತ್ತು ಚರ್ಚೆಗಳು ಇದ್ದರೆ kuberkp@gmail.com ಗೆ ಕಳಿಸಿಕೊಡಬೇಕು.
ಗ್ರಂಥ ಋಣಿ
1. ಸರ್ವಜ್ಞನ ಸಾಹಿತ್ಯ ಕುರಿತು ಅಧ್ಯಯನಗಳು..... ಸಂಪಾದಕ....ಡಾ. ವೀರೇಶ ಬಡಿಗೇರ.....ಕನ್ನಡ ವಿಶ್ವವಿದ್ಯಾಲಯ
2. ಸರ್ವಜ್ಞ: ತೌಲನಿಕ ಅಧ್ಯಯನಗಳು....ಸಂಪಾದಕ....ಡಾ. ಪಿ. ಮಹಾದೇವಯ್ಯ.....ಕನ್ನಡ ವಿಶ್ವವಿದ್ಯಾಲಯ
3. ಸರ್ವಜ್ಞನ ವಚನಗಳು........ಸಂಪಾದಕ...ಡಾ. ಎಲ್. ಬಸವರಾಜು
4. ಪರಮಾರ್ಥ (ಸರ್ವಜ್ಞನ ವಚನಗಳು).....ಸಂಪಾದಕ...ಡಾ. ಎಲ್. ಬಸವರಾಜು
5. ಸರ್ವಜ್ಞಮೂರ್ತಿಯ ವಚನಗಳು.......ಸಂಪಾದಕ....ಜಿ.ಎಂ, ಉಮಾಪತಿ ಶಾಸ್ತ್ರಿ
6. ದಕ್ಷಿಣದ ಸಂತ ಕವಿಗಳು.....ಡಾ. ಕೆ.ವಿ ಬ್ಯಾಳಿ
7. ಸರ್ವಜ್ಞ ವಚನ ಸಂಗ್ರಹ.....ಸಂ. ರುದ್ರಮೂರ್ತಿಶಾಸ್ತ್ರಿ
8. ವಚನ ಸಾಹಿತ್ಯ ಸಂವಾದ....ಪ್ರಕಾಶ ಪ್ರಜಾವಾಣಿ
6 ಕಾಮೆಂಟ್ಗಳು:
ಅದ್ಭುತ ಲೇಖನ
ಅದ್ಭುತವಾದ ಲೇಖನ
ಒಳ್ಳೆಯ ಬರಹ
Super sir
Very nice
ಕಾಮೆಂಟ್ ಪೋಸ್ಟ್ ಮಾಡಿ